ADVERTISEMENT

₹246 ಕೋಟಿ ಉಡುಗೊರೆ ಪಡೆದ ಆರೋಪ: ಭಾರತ ಮೂಲದ ಸಿಂಗಪುರ ಸಚಿವನ ವಿರುದ್ಧ ವಿಚಾರಣೆ

ಪಿಟಿಐ
Published 8 ಮೇ 2024, 13:21 IST
Last Updated 8 ಮೇ 2024, 13:21 IST
<div class="paragraphs"><p>ಎಸ್.ಈಶ್ವರನ್</p></div>

ಎಸ್.ಈಶ್ವರನ್

   

ಎಕ್ಸ್ ಚಿತ್ರ

ಸಿಂಗಪುರ: ದುಬಾರಿ ಉಡುಗೊರೆ ಪಡೆದ ಆರೋಪದಡಿ ಭಾರತ ಮೂಲದ ಸಿಂಗಪುರ ಸರ್ಕಾರದ ಮಾಜಿ ಸಚಿವ ಎಸ್.ಈಶ್ವರನ್ ವಿರುದ್ಧದ ಎಲ್ಲಾ ಆರೋಪಗಳ ವಿಚಾರಣೆಗೆ ಅಲ್ಲಿನ ಹೈಕೋರ್ಟ್ ಒಪ್ಪಿಗೆ ಸೂಚಿಸಿದೆ. ವಿಚಾರಣೆಯು ಬರುವ ಆಗಸ್ಟ್‌ನಿಂದ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಸುಮಾರು ₹246 ಕೋಟಿ ಮೌಲ್ಯದ ಉಡುಗೊರೆ ಸ್ವೀಕರಿಸಿದ ಆರೋಪ ಇವರ ಮೇಲಿದೆ. ನ್ಯಾಯಾಲಯದಲ್ಲಿ ಈಶ್ವರನ್ ಪರ ವಕೀಲ ದೇವಿಂದರ್ ಸಿಂಗ್ ಅವರು ವಾದ ಮಂಡಿಸಿ, ‘ಸಚಿವರಾಗಿದ್ದ ಅವಧಿಯಲ್ಲಿ ಅದರ ಸ್ಥಾನಮಾನದ ಇತಿಮಿತಗಳ ಅರಿವು ನನ್ನ ಕಕ್ಷೀದಾರರಿಗೆ ಇತ್ತು. ಹೀಗಾಗಿ ತಮ್ಮ ಮೇಲೆ ಹೊರಿಸಲಾಗಿರುವ ಎಲ್ಲಾ ಆರೋಪಗಳ ವಿಚಾರಣೆಯನ್ನೂ ನ್ಯಾಯಾಲಯ ನಡೆಸಲಿ. ಅದನ್ನು ಎದುರಿಸಲು ಸಿದ್ಧ ಎಂದಿದ್ದಾರೆ’ ಎಂಬ ಅಂಶವನ್ನು ನ್ಯಾಯಲಯಕ್ಕೆ ಹೇಳಿದರು.

‘ಕುಟುಂಬದವರು ಹಾಗೂ ವೈಯಕ್ತಿಕ ಸ್ನೇಹಿತರಿಂದ ಉಡುಗೊರೆ ಸ್ವೀಕರಿಸುವುದನ್ನು ತಡೆಯುವುದು ಸಚಿವರಿಂದ ಸಾಧ್ಯವಾಗಿರಲಿಲ್ಲ. ಆದರೆ ಆರೋಪ ಕೇಳಿಬಂದಿರುವ ಉಡುಗೊರೆಯು ರಿಯಲ್ ಎಸ್ಟೇಟ್‌ ಉದ್ಯಮಿ ಆಂಗ್ ಬೆಂಗ್‌ ಸೆಂಗ್‌ ಹಾಗೂ ನಿರ್ಮಾಣ ಸಂಸ್ಥೆಯ ಮಾಲೀಕ ಲುಮ್ ಕಾಕ್‌ ಸೆಂಗ್ ಅವರು ನೀಡಿದ್ದು ಎಂಬುದರ ಮಾಹಿತಿ ಈಶ್ವರನ್‌ಗೆ ಇರಲಿಲ್ಲ. ಸ್ನೇಹಿತರು ನೀಡಿದ ಉಡುಗೊರೆಯನ್ನು ಸಂಶಯದಿಂದ ನೋಡುವ ಸ್ಥಿತಿಯಲ್ಲಿ ಅವರು ಇರಲಿಲ್ಲ. ಜತೆಗೆ ಈ ಉಡುಗೊರೆಯ ಹಿಂದೆ ಸಂಚು ಅಡಗಿರುವ ಸಂಗತಿಯೂ ಅವರಿಗೆ ಗೊತ್ತಿರಲಿಲ್ಲ’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

61 ವರ್ಷದ ಈಶ್ವರನ್ ಅವರ ವಿರುದ್ಧ ಮೊದಲು 27 ಆರೋಪಗಳು ಕೇಳಿಬಂದಿದ್ದವು. ನಂತರ ಮತ್ತೆ 8 ಆರೋಪಗಳು ಸಲ್ಲಿಕೆಯಾಗಿದ್ದವು. ಇವುಗಳಲ್ಲಿ 24 ಆರೋಪಗಳು ಸಾರ್ವಜನಿಕರ ಸೇವಕನಾಗಿ ದುಬಾರಿ ಉಡುಗರೆ ಪಡೆದ ಆರೋಪವಾದರೆ, ಭ್ರಷ್ಟಾಚಾರ ಪ್ರಕರಣ ಮತ್ತು ಒಂದು ನ್ಯಾಯಕ್ಕೆ ಅಡ್ಡಿಪಡಿಸಿದ ಪ್ರಕರಣಗಳೂ ಸೇರಿದೆ. ಇದರಲ್ಲಿ ವಿಮಾನ ಟಿಕೆಟ್ ಹಾಗೂ ಹೋಟೆಲ್ ವಾಸ್ತವ್ಯ, ಕೆಲ ಕಾರ್ಯಕ್ರಮಗಳ ಟಿಕೆಟ್‌ ಹಾಗೂ ₹102 ಕೋಟಿ ಮೌಲ್ಯದ ಇನ್ನಿತರ ಉಡುಗೊರೆಗಳು ಸೇರಿವೆ ಎಂದೆನ್ನಲಾಗಿದೆ.

‘ತಾನು ನಿರಪರಾಧಿಯಾಗಿದ್ದು, ಎಲ್ಲಾ ಆರೋಪಗಳು ನಿರಾಧಾರ’ ಎಂದು ಈಶ್ವರನ್ ನ್ಯಾಯಾಲಯಕ್ಕೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.