ವಾಷಿಂಗ್ಟನ್: ಶ್ರೀಲಂಕಾಕ್ಕೆ ಸಾಲ ನೀಡಿ, ಅದರ ಆರ್ಥಿಕತೆಯನ್ನು ಹಳಿಗೆ ತರುವ ಸಂಬಂಧ ಚರ್ಚಿಸಲು ಇಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪಾಲ್ಗೊಂಡಿದ್ದರು.
ಆರ್ಥಿಕ ವಿದ್ಯಮಾನಗಳ ಕುರಿತು ಚರ್ಚಿಸಲು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹಾಗೂ ವಿಶ್ವಬ್ಯಾಂಕ್ ವತಿಯಿಂದ ನಡೆಯುತ್ತಿರುವ ಸಭೆಯ ಸಂದರ್ಭದಲ್ಲಿಯೇ ಈ ಉನ್ನತ ಮಟ್ಟದ ಸಭೆಯೂ ನಡೆಯಿತು.
ಯಾವುದೇ ದೇಶಕ್ಕೆ ಸಾಲ ನೀಡುವ ಕುರಿತ ಚರ್ಚೆ ವೇಳೆ, ಎಲ್ಲ ಸಾಲದಾತರನ್ನು ಸಮಾನವಾಗಿ ಕಾಣಬೇಕು ಹಾಗೂ ಪಾರದರ್ಶಕತೆಯನ್ನು ಖಾತರಿಪಡಿಸುವುದು ಅಗತ್ಯ ಎಂದು ನಿರ್ಮಲಾ ಸೀತಾರಾಮನ್ ಪ್ರತಿಪಾದಿಸಿದರು.
ಜಪಾನ್ ಹಣಕಾಸು ಸಚಿವ ಸುಜುಕಿ ಶುನಿಚಿ, ಶ್ರೀಲಂಕಾ ಸಚಿವ ಶೆಹನ್ ಸೆಮಾಸಿಂಘೆ, ಫ್ರಾನ್ಸ್‌ನ ಖಜಾನೆ ಇಲಾಖೆಯ ಪ್ರಧಾನ ನಿರ್ದೇಶಕ ಇಮ್ಯಾನುಯೆಲ್ ಮೌಲಿನ್ ಸಭೆಯಲ್ಲಿ ಇದ್ದರು. ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಅವರು ವರ್ಚುವಲ್ ವಿಧಾನದ ಮೂಲಕ ಪಾಲ್ಗೊಂಡಿದ್ದರು.
ಆಹ್ವಾನ: ‘ಜಿ–7 ಗುಂಪಿನ ಅಧ್ಯಕ್ಷ ಸ್ಥಾನದಲ್ಲಿರುವ ಜಪಾನ್, ಸಂಘಟನೆಯ ಸದಸ್ಯ ರಾಷ್ಟ್ರಗಳ ಹಣಕಾಸು ಸಚಿವರ ಹಾಗೂ ಕೇಂದ್ರೀಯ ಬ್ಯಾಂಕುಗಳ ಗವರ್ನರ್‌ಗಳ ಸಭೆಗೆ ನನ್ನನ್ನು ಆಹ್ವಾನಿಸಿದ್ದು, ಸಭೆಯಲ್ಲಿ ಪಾಲ್ಗೊಳ್ಳುವ ಆಲೋಚನೆ ಇದೆ’ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
‘ಜಿ–7 ಹಾಗೂ ಜಿ–20 ಸದಸ್ಯ ರಾಷ್ಟ್ರಗಳ ನಡುವೆ ಸಮನ್ವಯ ಸಾಧಿಸಲು ಜಪಾನ್ ಮತ್ತು ಭಾರತ ಒಟ್ಟಿಗೆ ಕೆಲಸ ಮಾಡಲಿವೆ’ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.