ವಾಷಿಂಗ್ಟನ್: ಪಶ್ಚಿಮ ವರ್ಜೀನಿಯಾ ಹಾಗೂ ಒಹಿಯೊ ನಗರದಲ್ಲಿ ಗೆಲ್ಲುವ ಮೂಲಕ ರಿಪಬ್ಲಿಕನ್ ಪಕ್ಷವು ಮಂಗಳವಾರ ಸೆನೆಟ್‌ನಲ್ಲಿ ಬಹುಮತ ಸಾಧಿಸಿದೆ. ಜನಪ್ರತಿನಿಧಿಗಳ ಸಭೆಯಲ್ಲಿಯೂ ಬಹುಮತ ಗಳಿಸುವತ್ತ ಪಕ್ಷ ಸಾಗುತ್ತಿದೆ. ಒಂದು ವೇಳೆ ಸೆನೆಟ್ ಹಾಗೂ ಜನಪ್ರತಿನಿಧಿಗಳ ಸಭೆ ಎರಡರಲ್ಲಿಯೂ ರಿಪಬ್ಲಿಕನ್ ಪಕ್ಷವು ಬಹುಮತ ಸಾಧಿಸಿದರೆ ಡೊನಾಲ್ಡ್ ಟ್ರಂಪ್ ಅವರ ಶಕ್ತಿಯು ಹಲವು ಪಟ್ಟು ಹೆಚ್ಚಲಿದೆ.
ಚುನಾವಣಾ ಪ್ರಚಾರಗಳಲ್ಲಿ ಟ್ರಂಪ್ ಅವರು ತೆರಿಗೆ ವ್ಯವಸ್ಥೆಯಲ್ಲಿನ ಬದಲಾವಣೆ ಹಾಗೂ ವಲಸೆ ನೀತಿಗಳನ್ನು ಕಠಿಣಗೊಳಿಸುವ ಕುರಿತು ಭರವಸೆಗಳನ್ನು ನೀಡಿದ್ದರು. ಎರಡೂ ಕಡೆಗಳಲ್ಲಿ ಬಹುಮತ ಪಡೆಯುವುದರೊಂದಿಗೆ ತಾವು ನೀಡಿದ ಭರವಸೆಗಳನ್ನು ಈಡೇರಿಸುವುದು ಟ್ರಂಪ್ ಅವರಿಗೆ ಸುಲಭವಾಗಲಿದೆ.
ಸೆನೆಟ್‌ನಲ್ಲಿ ಬಹುಮತ ಪಡೆಯುವುದರೊಂದಿಗೆ ಟ್ರಂಪ್ ಅವರಿಗೆ, ಸಂಪ್ರದಾಯವಾದಿ ನ್ಯಾಯಮೂರ್ತಿಗಳು ಹಾಗೂ ಸರ್ಕಾರದ ಮಟ್ಟದಲ್ಲಿ ಅಧಿಕಾರಿಗಳ ನೇಮಕ ಮಾಡಲು ಸಹಕಾರಿಯಾಗಲಿದೆ ಎನ್ನಲಾಗಿದೆ.
‘ಸೆನೆಟ್‌ನಲ್ಲಿನ ಪಕ್ಷದ ಗೆಲುವು ಅದ್ಬುತವಾದುದು’ ಎಂದು ಡೊನಾಲ್ಟ್ ಟ್ರಂಪ್ ಅವರು ಬಣ್ಣಿಸಿದ್ದಾರೆ.
‘ಜನಪ್ರತಿನಿಧಿಗಳ ಸಭೆ ಹಾಗೂ ಸೆನೆಟ್‌ನಲ್ಲಿನ ರಿಪಬ್ಲಿಕನ್ ಪಕ್ಷದ ಸದಸ್ಯರು ಮಹತ್ವಾಕಾಂಕ್ಷೆಯ 100 ದಿನಗಳ ಅಜೆಂಡಾವನ್ನು ರೂಪಿಸಲು ಕಾರ್ಯಪ್ರವೃತ್ತರಾಗಿದ್ದಾರೆ’ ಎಂದು ಜನಪ್ರತಿನಿಧಿಗಳ ಸಭೆಯ ಸ್ಪೀಕರ್ ಹಾಗೂ ರಿಪಬ್ಲಿಕನ್ ಪಕ್ಷದ ಮೈಕ್ ಜಾನ್ಸನ್ ತಿಳಿಸಿದರು.
‘ತಮ್ಮ ಶತ್ರುಗಳನ್ನು ಗಡೀಪಾರು ಮಾಡುವುದು ಹಾಗೂ ಅವರು ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲಾಗುವುದು’ ಎಂದು ಟ್ರಂಪ್ ಅವರು ಈಗಾಗಲೇ ಹಲವು ಬಾರಿ ಹೇಳಿದ್ದಾರೆ. ಸರ್ಕಾರದ ಸಂಸ್ಥೆಗಳನ್ನು ವಾಷಿಂಗ್ಟನ್‌ನಿಂದ ಹೊರಹಾಕಿ ಸರ್ಕಾರದ ಸಿಬ್ಬಂದಿಯನ್ನು ಬದಲಾಯಿಸುತ್ತೇವೆ. ನಾವು ‘ಫೆಡೆರಲ್ ಸರ್ಕಾರದ ಮೇಲಾಗಿರುವ ಗಾಯವನ್ನು ವಾಸಿ ಮಾಡುತ್ತೇವೆ’ ಎಂದೂ ಹೇಳಿದರು.
‘ಟ್ರಂಪ್ ಅವರು ತಮ್ಮ ಆಡಳಿತ ವೈಖರಿಯ ಕುರಿತು ದೊಡ್ಡ ಮಟ್ಟದಲ್ಲಿ ಯೋಚಿಸುತ್ತಿದ್ದಾರೆ’ ಎಂದರು.
‘ಸಮೋಸಾ ಕೋಕಸ್’ನಲ್ಲಿ ಈಗ ಆರು ಮಂದಿ
ಭಾರತ ಮೂಲದ ಒಟ್ಟು ಆರು ಮಂದಿ ಅಮೆರಿಕನ್ನರು ದೇಶದ ಜನಪ್ರತಿನಿಧಿಗಳ ಸಭೆಗೆ ಆಯ್ಕೆಯಾಗಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಐವರು ಭಾರತೀಯ ಅಮೆರಿಕನ್ನರು ಆಯ್ಕೆಯಾಗಿದ್ದರು.
ಸೆನೆಟ್ ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಇರುವ ಭಾರತ ಮೂಲದ ಅಮೆರಿಕನ್ನರ ಗುಂಪನ್ನು ‘ಸಮೋಸಾ ಕೋಕಸ್’ ಎಂದು ಕರೆಯಲಾಗುತ್ತದೆ.
ವಕೀಲ ಸುಹಾಸ್ ಸುಬ್ರಮಣ್ಯಂ ಅವರು ಮೊದಲ ಬಾರಿಗೆ ಜನಪ್ರತಿನಿಧಿಗಳ ಸಭೆಗೆ ಆಯ್ಕೆಯಾಗಿದ್ದಾರೆ. ಅಮಿ ಬೆರಾ ರಾಜಾ ಕೃಷ್ಣಮೂರ್ತಿ ರೋ ಖನ್ನಾ ಪ್ರಮೀಳಾ ಜಯಪಾಲ್ ಹಾಗೂ ಶ್ರೀ ಠಾಣೆದಾರ್... ಈ ಎಲ್ಲ ಭಾರತೀಯ ಅಮೆರಿಕನ್ನರು ಈ ಬಾರಿಯೂ ಜನಪ್ರತಿನಿಧಿಗಳ ಸಭೆಗೆ ಪುನರಾಯ್ಕೆಯಾಗಿದ್ದಾರೆ.
ಜನಪ್ರತಿನಿಧಿಗಳ ಸಭೆಯಲ್ಲಿ ಭಾರತ ಮೂಲದ ಸದಸ್ಯರ ಸಂಖ್ಯೆ ಅಧಿಕವಾಗುವ ನಿರೀಕ್ಷೆ ಇದೆ. ಅರಿಜೋನಾ ನಗರದಲ್ಲಿ ಡಾ. ಅಮಿಷ್ ಶಾ ಅವರು ರಿಪಬ್ಲಿಕನ್ ಪಕ್ಷದ ಎದುರಾಳಿಗಿಂತ ತುಸು ಮುನ್ನಡೆ ಸಾಧಿಸಿದ್ದಾರೆ.
ಸೆನೆಟ್: ಮೊದಲ ಬಾರಿಗೆ ಇಬ್ಬರು ಕಪ್ಪುವರ್ಣೀಯ ಮಹಿಳೆಯರ ಆಯ್ಕೆ
‘ಮುಂದಿನ ಎರಡು ವರ್ಷಗಳಲ್ಲಿ ನಮ್ಮ ದೇಶವು 250ನೇ ವರ್ಷಕ್ಕೆ ಕಾಲಿಡಲಿದೆ. ಈ ಅವಧಿಯಲ್ಲಿ ಅಮೆರಿಕದ ಸೆನೆಟ್‌ನಲ್ಲಿ 2 ಸಾವಿರಕ್ಕೂ ಅಧಿಕ ಮಂದಿ ಸೇವೆ ಸಲ್ಲಿಸಿದ್ದಾರೆ. ಬಹುಶಃ ಇಷ್ಟು ಜನರಲ್ಲಿ ನನ್ನಂತೆ ಕಾಣುವವರು ಮೂರೇ ಜನರು ಇದ್ದರು’ ಇದು ಮೇರಿಲೆಂಡ್‌ನಿಂದ ಸೆನೆಟ್‌ಗೆ ಆಯ್ಕೆಯಾದ ಮೊದಲ ಕಪ್ಪುವರ್ಣೀಯ ಮಹಿಳೆ ಆಂಜೆಲಾ ಅಲ್ಸೊಬ್ರೂಕ್ ಅವರ ಮಾತುಗಳು.
ಡೆಲವೇರ್‌ನಿಂದ ಲಿಸಾ ಬ್ಲಂಟ್ ರೋಚೆಸ್ಟರ್ ಎಂಬ ಮತ್ತೊಬ್ಬ ಕಪ್ಪುವರ್ಣೀಯ ಮಹಿಳೆ ಕೂಡ ಸೆನೆಟ್‌ಗೆ ಆಯ್ಕೆಯಾಗಿದ್ದಾರೆ. ಜೊತೆಗೆ ಇದೇ ಮೊದಲ ಬಾರಿಗೆ ಲಿಂಗ ಪರಿವರ್ತಿತ ಮಹಿಳೆ ಮೆಕ್‌ಬ್ರೈಡ್ ಅವರು ಆಯ್ಕೆಯಾಗಿದ್ದಾರೆ. ಈ ಮೂವರು ಡೆಮಾಕ್ರಟಿಕ್ ಪಕ್ಷದವರಾಗಿದ್ದಾರೆ.
ಈ ಎಲ್ಲ ಕಾರಣಗಳಿಂದ ಈ ಬಾರಿಯ ಚುನಾವಣೆಯು ಹಲವು ಮೊದಲುಗಳಿಗೆ ಸಾಕ್ಷಿಯಾಗಿದೆ. ಜೊತೆಗೆ ಸೆನೆಟ್ ಕೂಡ ವೈವಿಧ್ಯಮಯವಾಗಿದೆ. ಅಮೆರಿಕ ಮೂಲದವರೇ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುತ್ತಿದ್ದ ಸೆನೆಟ್‌ನಲ್ಲಿ ಈ ಬಾರಿ ಬೇರೆ ಬೇರೆ ದೇಶಗಳ ಮೂಲದ ಅಮೆರಿಕನ್ನರು ಆಯ್ಕೆಯಾಗಿದ್ದಾರೆ.
ಸುಹಾಸ್‌ಗಿದೆ ಬೆಂಗಳೂರಿನ ನಂಟು
ವಕೀಲ ಸುಹಾಸ್ ಸುಬ್ರಮಣ್ಯಂ ಅವರು ವರ್ಜೀನಿಯಾ ನಗರದಿಂದ ಜನಪ್ರತಿನಿಧಿಗಳ ಸಭೆಗೆ ಆಯ್ಕೆಯಾದ ಹಿಂದೂ ಸಮುದಾಯದ ಮೊದಲಿಗರಾಗಿದ್ದಾರೆ. ಅಮೆರಿಕದಲ್ಲಿರುವ ಭಾರತೀಯರಲ್ಲಿ ಸುಹಾಸ್ ಪ್ರಸಿದ್ಧಿ ಗಳಿಸಿದ್ದಾರೆ. ಪ್ರಸ್ತುತ ಅವರ ವರ್ಜೀನಿಯಾದಿಂದ ಸೆನೆಟ್ ಸದಸ್ಯರಾಗಿದ್ದಾರೆ. ಸುಹಾಸ್ ಅವರು ಡೆಮಾಕ್ರಟಿಕ್ ಪಕ್ಷದವರು.
ಈ ಹಿಂದೆ 2015ರಲ್ಲಿ ಸುಹಾಸ್ ಅವರು ನೀತಿ ನಿರೂಪಣೆಯ ವಿಷಯದಲ್ಲಿ ಬರಾಕ್ ಒಬಾಮ ಅವರಿಗೆ ಸಲಹೆಗಾರರಾಗಿಯೂ ಕೆಲಸ ಮಾಡಿದ್ದಾರೆ. ವಿಶೇಷವೆಂದರೆ ಸುಹಾಸ್ ಅವರಿಗೆ ಬೆಂಗಳೂರಿನ ನಂಟಿದೆ. ಅವರ ತಾಯಿ ಬೆಂಗಳೂರಿನವರು. ತಂದೆ ಚೆನ್ನೈನವರು. ದಂಪತಿ 1970ರಲ್ಲಿ ಅಮೆರಿಕಕ್ಕೆ ತೆರಳಿದ್ದರು.
ಮತದಾನಕ್ಕೂ ಮೊದಲು ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸುಹಾಸ್ ಅವರು ತಮ್ಮ ಬಾಲ್ಯದ ಕುರಿತು ನೆನಪುಗಳನ್ನು ಹಂಚಿಕೊಂಡಿದ್ದಾರೆ. ‘ನನ್ನ ತಾಯಿ ಬೆಂಗಳೂರಿನವರು. ತಂದೆ ಚೆನ್ನೈನವರು. ತಂದೆ ಸೇನೆಯಲ್ಲಿದ್ದರು. ಸಿಕಂದರಾಬಾದ್‌ನಲ್ಲಿ ನಾನು ನನ್ನ ಬಾಲ್ಯದ ಹೆಚ್ಚಿನ ಸಮಯವನ್ನು ಕಳೆದಿದ್ದೇನೆ. ಅಮೆರಿಕದಲ್ಲಿ ಫಿಜಿಷಿಯನ್ ಆಗಲು ನನ್ನ ತಾಯಿಗೆ ಬಹಳ ಆಸೆ ಇತ್ತು. ನನ್ನ ತಂದೆ–ತಾಯಿ ಬೆಂಗಳೂರಿನ ವೈದ್ಯಕೀಯ ಕಾಲೇಜು ಒಂದರಲ್ಲಿ ಭೇಟಿಯಾಗಿದ್ದರು. ಭಾರತದ ಬೇರುಗಳಿಗೆ ಎಂದಿಗೂ ಅಂಟಿಕೊಂಡಿರಬೇಕು ಎನ್ನುವುದು ಅವರ ಇಚ್ಛೆಯಾಗಿತ್ತು’ ಎಂದರು.
‘ಆದ್ದರಿಂದ ನಾನು ಪ್ರತೀ ಬೇಸಿಗೆಯಲ್ಲಿ ಭಾರತಕ್ಕೆ ಹೋಗುತ್ತೇನೆ. ಅಲ್ಲಿ ಇನ್ನೂ ನನ್ನ ಕುಟುಂಬ ಇದೆ. ಕೇವಲ ಭಾರತ ಮೂಲದ ಅಮೆರಿಕದವ ಎಂದು ಕರೆಸಿಕೊಳ್ಳುವುದಷ್ಟೇ ಮುಖ್ಯವಲ್ಲ. ನನ್ನ ಬೇರಿನ ಪರಂಪರೆಯನ್ನು ಮುಂದುವರಿಸುವುದೂ ನನಗೆ ಮುಖ್ಯ’ ಎಂದರು.
‘ಅಮೆರಿಕ–ಭಾರತ ನಡುವಿನ ಬಾಂಧವ್ಯ ಪ್ರಮುಖವಾದುದು. ಯಾಕೆಂದರೆ ಭೂಮಿ ಮೇಲಿನ ಅತ್ಯಂತ ಪ್ರಮುಖ ಪ್ರಜಾಪ್ರಭುತ್ವ ದೇಶ ಭಾರತ. ಆದ್ದರಿಂದ ಜಗತ್ತಿನ ಪ್ರಜಾಪ್ರಭುತ್ವವಾದಿ ದೇಶಗಳೊಂದಿಗೆ ಉತ್ತಮ ಸಂಬಂಧ ಹೊಂದುವುದು ಅಮೆರಿಕಕ್ಕೆ ಮುಖ್ಯವಾದುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.