ADVERTISEMENT

ಸ್ಲೊವಾಕಿಯಾ ಪ್ರಧಾನಿ ರಾಬರ್ಟ್ ಫಿಕೊ ಮೇಲೆ ಗುಂಡಿನ ದಾಳಿ: ಆರೋಗ್ಯ ಸ್ಥಿತಿ ಗಂಭೀರ

ರಾಯಿಟರ್ಸ್
Published 15 ಮೇ 2024, 14:42 IST
Last Updated 15 ಮೇ 2024, 14:42 IST
<div class="paragraphs"><p>ರಾಬರ್ಟ್ ಫಿಕೊ</p></div>

ರಾಬರ್ಟ್ ಫಿಕೊ

   

ಎಕ್ಸ್ ಚಿತ್ರ

ಹ್ಯಾಂಡ್ಲೊವಾ: ಯುರೋಪ್‌ ಖಂಡದ ಕೇಂದ್ರಭಾಗದಲ್ಲಿರುವ ರಾಷ್ಟ್ರ ಸ್ಲೊವಾಕಿಯಾದ ಪ್ರಧಾನಿ ರಾಬರ್ಟ್ ಫಿಕೊ (59) ಅವರ ಮೇಲೆ ಬುಧವಾರ ಗುಂಡಿನ ದಾಳಿ ನಡೆದಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಅಲ್ಲಿನ ಆಡಳಿತ ಹೇಳಿದೆ.

ADVERTISEMENT

ರಾಜಧಾನಿ ಬ್ರಟಿಸ್ಲಾವಾದಿಂದ ಉತ್ತರಕ್ಕಿರುವ ಹ್ಯಾಂಡ್ಲೊವಾದಲ್ಲಿ ಆಯೋಜನೆಗೊಂಡಿದ್ದ ಸರ್ಕಾರಿ ಸಭೆಯಲ್ಲಿ ಪಾಲ್ಗೊಂಡು ಮರಳುತ್ತಿದ್ದ ಅವರ ಮೇಲೆ ವ್ಯಕ್ತಿಯೊಬ್ಬ ಹಲವು ಬಾರಿ ಗುಂಡಿನ ದಾಳಿ ನಡೆಸಿದ್ದಾನೆ. ಫಿಕೊ ಅವರ ಹೊಟ್ಟೆಗೆ ಗುಂಡುಗಳು ಹೊಕ್ಕಿರುವುದರಿಂದ ಅಲ್ಲಿಯೇ ಅವರು ಕುಸಿದು ಬಿದ್ದರು. ತಕ್ಷಣ ಅವರನ್ನು ಹೆಲಿಕಾಪ್ಟರ್ ಮೂಲಕ ಬನಾಸ್ಕಾ ಬಿಸ್ಟಾರಿಕಾ ಆಸ್ಪತ್ರೆಗೆ ಸಾಗಿಸಲಾಯಿತು.

ಗುಂಡು ಹಾರಿಸಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿರುವುದಾಗಿ ವರದಿಯಾಗಿದೆ.

ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿರುವ ಸ್ಲೊವಾಕಿಯಾದ ಪ್ರಧಾನಿಯಾಗಿ 4ನೇ ಬಾರಿಗೆ ಫಿಕೊ ಮರು ಆಯ್ಕೆಯಾಗಿದ್ದರು. ಐರೋಪ್ಯ ಪರ ಹಾಗೂ ರಾಷ್ಟ್ರೀಯವಾದಿಗಳ ನಡುವಿನ ಮಾರ್ಗ ಆಯ್ದುಕೊಂಡ ಫಿಕೊ, ಐರೋಪ್ಯ ಒಕ್ಕೂಟ ಹಾಗೂ ಅಮೆರಿಕದ ನೀತಿಗೆ ವಿರುದ್ಧವಾದ ಹೆಜ್ಜೆ ಇಟ್ಟಿದ್ದರು. ಇದಕ್ಕಾಗಿ ಸಾರ್ವಜನಿಕರ ಅಭಿಪ್ರಾಯ ಮತ್ತು ಬದಲಾದ ರಾಜಕೀಯ ಪರಿಸ್ಥಿತಿಗೆ ತಕ್ಕಂತೆ ಹೆಜ್ಜೆ ಇಡುವ ಇಂಗಿತ ಹೊಂದಿದ್ದರು. ಐರೋಪ್ಯ ಒಕ್ಕೂಟದ ವಲಸೆ ಕೋಟಾವನ್ನು ಫಿಕೊ ತಿರಸ್ಕರಿಸಿದ್ದರು. ಉಕ್ರೇನ್‌ಗೆ ಆರ್ಥಿಕ ನೆರವು ನೀಡುತ್ತಿದ್ದರು ಎಂದೆನ್ನಲಾಗಿದೆ.

ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಯೋಜನೆ ಹೊಂದಿದ್ದ ವಿರೋಧ ಪಕ್ಷವು ಘಟನೆ ನಂತರ ಅದನ್ನು ಕೈಬಿಟ್ಟಿದೆ. ಯುರೋಪಿಯನ್ ಕಮಿಷನ್‌ನ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೆಯನ್ ಅವರು ಘಟನೆಯನ್ನು ಖಂಡಿಸಿದ್ದಾರೆ. ಜರ್ಮನಿಯ ಚಾನ್ಸಲರ್ ಓಲಾಫ್‌ ಸ್ಕೋಲ್ಜ್ ಅವರು ಆಘಾತ ವ್ಯಕ್ತಪಡಿಸಿದ್ದಾರೆ. ಯುರೋಪ್‌ನ ರಾಜಕೀಯದಲ್ಲಿ ಹಿಂಸೆಗೆ ಜಾಗವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.