ಬನ್‌ಸ್ಕಾ ಬಿಸ್ಟ್ರಿಕಾ (ಸ್ಲೊವಾಕಿಯಾ): ಪ್ರಧಾನಿ ರಾಬರ್ಟ್ ಫಿಕೊ ಅವರ ಮೇಲೆ ಹಂತಕನೊಬ್ಬ ಬುಧವಾರ ಹಲವು ಸುತ್ತು ಗುಂಡು ಹಾರಿಸಿದ ಘಟನೆಯ ನಂತರ, ಕೇಂದ್ರ ಯುರೋಪಿನ ದೇಶ ಸ್ಲೊವಾಕಿಯಾದಲ್ಲಿ ಶಾಂತಿ ಕಾಪಾಡುವಂತೆ ರಾಜಕಾರಣಿಗಳು ಕರೆ ನೀಡಿದ್ದಾರೆ.
ರಾಜಕೀಯ ಧ್ರುವೀಕರಣದ ನಡುವೆ ವರದಿಯಾದ ರಾಜಕೀಯ ಹಿಂಸಾಚಾರದ ಈ ಪ್ರಕರಣ ಒಂದು ರೀತಿಯಲ್ಲಿ ಸಾರ್ವಜನಿಕ ವಲಯದಲ್ಲಿ ದಿಗ್ಭ್ರಮೆ ಮೂಡಿಸಿದೆ.
‘ದೇಶದಲ್ಲಿ ಶಾಂತಿ ಕಾಪಾಡುವ ಮತ್ತು ಹಿಂಸಾಚಾರ ತಡೆಯುವ ಪ್ರಯತ್ನವಾಗಿ ರಾಜಕೀಯ ಪಕ್ಷಗಳ ಮುಖ್ಯಸ್ಥರು ಸಭೆ ಸೇರಲಿದ್ದಾರೆ. ಶಾಂತಿ ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಜವಾಬ್ದಾರಿ ವಹಿಸಲು ನಾವು ಕರೆ ನೀಡಲು ಬಯಸುತ್ತೇವೆ’ ಎಂದು ಫಿಕೊ ಅವರ ರಾಜಕೀಯ ಪ್ರತಿಸ್ಪರ್ಧಿ, ನಿರ್ಗಮಿತ ಅಧ್ಯಕ್ಷ ಜುಝಾನಾ ಕ್ಯಾಪುಟೋವಾ ಅವರು ಗುರುವಾರ ರಾಜಧಾನಿ ಬ್ರಾಟಿಸ್ಲಾವಾದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಯುರೋಪ್ ಸಂಸತ್ ಚುನಾವಣೆಗಳಿಗೆ ವಾರಗಳ ಮೊದಲು ಜನಪ್ರಿಯ ನಾಯಕನ ಹತ್ಯೆಗೆ ಹಲವು ಸುತ್ತಿನ ಗುಂಡಿನ ದಾಳಿ ನಡೆದಿರುವುದು ಈ ಸಣ್ಣ ದೇಶವನ್ನು ಬೆಚ್ಚಿಬೀಳಿಸಿರುವುದಷ್ಟೇ ಅಲ್ಲ, ಇದರ ಆಘಾತವು ಯುರೋಪ್ ಖಂಡದಾದ್ಯಂತವೂ ಪ್ರತಿಧ್ವನಿಸಿದೆ.
ಗಂಭೀರವಾಗಿ ಗಾಯಗೊಂಡಿರುವ ಫಿಕೊ ಅವರ ಸ್ಥಿತಿ ಗುರುವಾರ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ಹೇಳಿದರು.
‘ಫಿಕೊ ಅವರಿಗೆ ವೈದ್ಯರು ಐದು ತಾಸು ಶಸ್ತ್ರ ಚಿಕಿತ್ಸೆ ನಡೆಸಿದರು. ಅವರ ಪ್ರಾಣ ಅಪಾಯದಲ್ಲಿರುವ ವರದಿ ಇದೆ. ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಬನ್‌ಸ್ಕಾ ಬೈಸ್ಟ್ರಿಕಾದ ಎಫ್.ಡಿ. ರೂಸ್‌ವೆಲ್ಟ್ ಆಸ್ಪತ್ರೆಯ ನಿರ್ದೇಶಕರಾದ ಮಿರಿಯಮ್ ಲ್ಯಾಪುನಿಕೋವಾ ತಿಳಿಸಿದ್ದಾರೆ.
ಶಂಕಿತನೊಬ್ಬನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಫಿಕೊ ಅವರು ಸರ್ಕಾರಿ ಸಭೆಯಲ್ಲಿ ಪಾಲ್ಗೊಂಡಿದ್ದಾಗ ನಡೆದಿರುವ ಈ ದಾಳಿಯ ಹಿಂದೆ ರಾಜಕೀಯ ಉದ್ದೇಶವಿರುವುದು ತನಿಖೆಯಿಂದ ಸ್ಪಷ್ಟವಾಗಿದೆ ಎಂದು ಗೃಹ ಸಚಿವ ಮಾಟಸ್ ಸುಟಾಜ್ ಎಸ್ಟೊಕ್ ಹೇಳಿದ್ದಾರೆ.
ಹ್ಯಾಂಡ್ಲೊವಾ ಪಟ್ಟಣದ ಹೌಸ್ ಆಫ್ ಕಲ್ಚರ್ ಬಳಿ ಆಯೋಜಿಸಿದ್ದ ಸಭೆಯಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಪ್ರಧಾನಿ ರಾಬರ್ಟ್ ಫಿಕೊ ಮಾತನಾಡುತ್ತಿದ್ದ ವೇಳೆ, ಬಂದೂಕುಧಾರಿಯೊಬ್ಬ ಅವರ ಮೇಲೆ ಐದು ಸುತ್ತು ಗುಂಡು ಹಾರಿಸಿದ್ದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.