ರಿಯೊ ಡಿ ಜನೈರೊ: ಸಣ್ಣ ಪ್ರಯಾಣಿಕ ವಿಮಾನವೊಂದು ಬ್ರೆಜಿಲ್‌ನ ಅಮೆಜಾನ್ ಮಳೆಕಾಡಿನಲ್ಲಿ ಶನಿವಾರ ಪತನವಾಗಿದ್ದು, ವಿಮಾನದಲ್ಲಿದ್ದ ಎಲ್ಲ 14 ಮಂದಿಯೂ ಸಾವನ್ನಪ್ಪಿದ್ದಾರೆ.
‘ಬಾರ್ಸೆಲೋಸ್‌ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ 12 ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದು, ತೀವ್ರ ವಿಷಾದನೀಯ’ ಎಂದು ಅಮೆಜಾನ್ ರಾಜ್ಯದ ಗವರ್ನರ್ ವಿಲ್ಸನ್ ಲಿಮಾ ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಎಂಬ್ರೇರ್ ಪಿಟಿ-ಎಸ್‌ಒಜಿ ವಿಮಾನವು ಅಮೆಜಾನ್ ರಾಜ್ಯದ ರಾಜಧಾನಿ ಮನೌಸ್ ನಗರದಿಂದ ಟೇಕ್ ಆಫ್ ಆಗಿತ್ತು. ಬ್ರೆಜಿಲ್ ಪ್ರವಾಸಿಗರು ಮೀನುಗಾರಿಕೆಗಾಗಿ ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಭಾರಿ ಮಳೆ ಸುರಿಯುತ್ತಿದ್ದ ವೇಳೆ ಇಳಿಯಲು ಪ್ರಯತ್ನಿಸುತ್ತಿದ್ದಾಗ ಅದು ಅಪಘಾತಕ್ಕೀಡಾಯಿತು ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಬ್ರೆಜಿಲ್‌ನ ವಾಯುಪಡೆಯು ಅಪಘಾತದ ಮಾಹಿತಿ ಕಲೆಹಾಕಲು ಮತ್ತು ತನಿಖೆಗೆ ಬೇಕಾದ ಪುರಾವೆಗಳನ್ನು ಸಂರಕ್ಷಿಸಲು ಮನೌಸ್‌ನಿಂದ ತಂಡವನ್ನು ಕಳುಹಿಸಿದೆ ಎಂದು ವಾಯುಪಡೆ ಹೇಳಿಕೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.