ADVERTISEMENT

ಇರಾನ್‌ನ ಸರ್ವೋಚ್ಚ ನಾಯಕ ಖಮೇನಿಯ ಹೊಸ ಖಾತೆಗೆ ನಿರ್ಬಂಧ ಹೇರಿದ 'ಎಕ್ಸ್'

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಅಕ್ಟೋಬರ್ 2024, 6:05 IST
Last Updated 28 ಅಕ್ಟೋಬರ್ 2024, 6:05 IST
<div class="paragraphs"><p>ಅಯತೊಲ್ಲಾ&nbsp;ಅಲಿ ಖಮೇನಿ</p></div>

ಅಯತೊಲ್ಲಾ ಅಲಿ ಖಮೇನಿ

   

ರಾಯಿಟರ್ಸ್ ಚಿತ್ರ

ಟೆಹರಾನ್: ಇರಾನ್‌ನ ಸರ್ವೋಚ್ಚ ನಾಯಕ ಅಯಾತುಲ್ಲಾ ಅಲಿ ಖಮೇನಿ ಅವರ ಹೊಸ ಖಾತೆಯನ್ನು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್/ಟ್ವಿಟರ್‌ ನಿರ್ಬಂಧಿಸಿದೆ.

ADVERTISEMENT

ಖಮೇನಿ ಅವರ ಹೆಸರಲ್ಲಿ ಹಿಬ್ರೂ ಭಾಷೆಯ (@Khamenei_Heb) ಖಾತೆಯನ್ನು ಭಾನುವಾರವಷ್ಟೇ ತೆರೆಯಲಾಗಿತ್ತು. ಇದರಲ್ಲಿ 'ದೇವರು ಅತ್ಯಂತ ಕರುಣಾಮಯಿ' ಎಂಬ ಸಂದೇಶವನ್ನು ಹಂಚಿಕೊಳ್ಳಲಾಗಿತ್ತು. ನಿರ್ಬಂಧಕ್ಕೆ ಸಂಬಂಧಿಸಿದಂತೆ ಆ ಖಾತೆಯಲ್ಲಿ, 'ಎಕ್ಸ್‌ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಖಾತೆ ಅಮಾನತಿನಲ್ಲಿಡಲಾಗಿದೆ' ಎಂಬ ಸಂದೇಶವಿದೆ.

ಯಾವ ನಿಯಮದ ಉಲ್ಲಂಘನೆಯಾಗಿದೆ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಉದ್ಯಮಿ ಎಲಾನ್‌ ಮಸ್ಕ್‌ ಒಡೆತನದ ಕಂಪನಿಯು ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ.

ಈ ತಿಂಗಳ ಆರಂಭದಲ್ಲಿ ಇರಾನ್‌ ನಡೆಸಿದ್ದ ಸರಣಿ ಕ್ಷಿಪಣಿ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್‌ ಶನಿವಾರ ಪ್ರತಿದಾಳಿ ನಡೆಸಿತ್ತು. ಅದಕ್ಕೆ ಸಂಬಂಧಿಸಿದಂತೆ ಭಾನುವಾರ ಪ್ರತಿಕ್ರಿಯಿಸಿದ್ದ ಖಮೇನಿ, ದಾಳಿಯನ್ನು ಉತ್ಪ್ರೇಕ್ಷಿಸುವಂತಿಲ್ಲ ಎಂದಿದ್ದರು.

85 ವರ್ಷದ ಖಮೇನಿ ಅವರ ಹೆಸರಿನ ಹಲವು ಖಾತೆಗಳು 'ಎಕ್ಸ್‌'ನಲ್ಲಿವೆ. ಅವರ ಕಚೇರಿಯು ಬೇರೆ ಬೇರೆ ಭಾಷೆಗಳಲ್ಲಿ ಸಂದೇಶಗಳನ್ನು ಹಂಚಿಕೊಳ್ಳುತ್ತದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಖಮೇನಿ ಅವರ ಖಾತೆಗೆ ನಿರ್ಬಂಧ ಹೇರುತ್ತಿರುವುದು ಇದೇ ಮೊದಲಲ್ಲ. 2023ರ ಅಕ್ಟೋಬರ್‌ 7ರಂದು ಹಮಾಸ್‌ ಬಂಡುಕೋರರು ಇಸ್ರೇಲ್‌ ಮೇಲೆ ದಾಳಿ ನಡೆಸಿದ್ದನ್ನು ಬೆಂಬಲಿಸಿದ್ದಕ್ಕಾಗಿ ಅವರ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂ ಖಾತೆಗಳನ್ನು ಮೆಟಾ ಸಂಸ್ಥೆ ತೆಗೆದುಹಾಕಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.