ಕೊನಕ್ರಿ (ಗಿನಿ): ಪಶ್ಚಿಮ ಆಫ್ರಿಕಾದ ಗಿನಿ ರಾಷ್ಟ್ರದಲ್ಲಿ ಬಂಡಾಯ ಎದ್ದಿರುವ ಯೋಧರು, ಅಧ್ಯಕ್ಷ ಆಲ್ಫಾ ಕೊಂಡೆ (83) ಅವರನ್ನು ಭಾನುವಾರ ಬಂಧಿಸಿದ್ದಾರೆ. ಅಧ್ಯಕ್ಷೀಯ ಸೌಧದ ಸಮೀಪ ಹಲವು ಗಂಟೆಗಳು ಗುಂಡಿನ ಮಳೆಗರೆದು, ಕ್ಷಿಪ್ರಕ್ರಾಂತಿಯಿಂದಾಗಿ ಸರ್ಕಾರದ ವಿಸರ್ಜನೆಯಾಗಿದೆ ಎಂದು ಸರ್ಕಾರಿ ಟಿವಿ ಮಾಧ್ಯಮದಲ್ಲಿ ಪ್ರಕಟಿಸಲಾಗಿದೆ.
ಸರ್ಕಾರಿ ಟಿವಿ ಮಾಧ್ಯಮದಲ್ಲಿ ಕಾಣಿಸಿಕೊಂಡ ಸೇನೆಯ ಕರ್ನಲ್ ಮಾಮಾಡಿ ದೌಂಬೌಯಾ, ದೇಶದ ಗಡಿಗಳನ್ನು ಮುಚ್ಚಲಾಗಿದೆ ಹಾಗೂ ದೇಶದ ಸಂವಿಧಾನವು ಅಸಿಂಧುಗೊಂಡಿದೆ ಎಂದು ಪ್ರಕಟಿಸಿದ್ದಾರೆ.
'ದೇಶವನ್ನು ರಕ್ಷಿಸುವುದು ಯೋಧರ ಕರ್ತವ್ಯವಾಗಿದೆ. ಒಬ್ಬ ವ್ಯಕ್ತಿಗೆ ಇಡೀ ರಾಜಕೀಯವನ್ನು ಬಿಡಲು ಸಾಧ್ಯವಿಲ್ಲ. ನಾವು ಅದನ್ನು ಜನರಿಗೆ ಬಿಡುತ್ತೇವೆ' ಎಂದು ಸೇನಾಧಿಕಾರಿ ಹೇಳಿದ್ದಾರೆ.
ಕರ್ನಲ್ ದೌಂಬೌಯಾಗೆ ಸೇನೆಯೊಳಗೆ ಇರುವ ಬೆಂಬಲದ ಬಗ್ಗೆ ಸ್ಪಷ್ಟವಾಗಿಲ್ಲ. ಎಲ್ಲ ಯೋಧರು ಅವರನ್ನು 'ಬೆಂಬಲಿಸಿದ್ದಾರೆಯೋ ಅಥವಾ ಅಧ್ಯಕ್ಷರಿಗೆ ಪ್ರಾಮಾಣಿಕರಾಗಿರುವ ಯೋಧರು ಮತ್ತೆ ನಿಯಂತ್ರಣ ತೆಗೆದುಕೊಳ್ಳಲು ಮುಂದಾಗಲಿದ್ದಾರೆಯೇ' ಎಂಬುದು ತಿಳಿದು ಬಂದಿಲ್ಲ.
ಗಿನಿಯಾದ ಗವರ್ನರ್‌ಗಳ ಸ್ಥಾನಕ್ಕೆ ಸ್ಥಳೀಯ ಕಮಾಂಡರ್‌ಗಳನ್ನು ನೇಮಕ ಮಾಡುವುದಾಗಿ ಸೇನಾಡಳಿತ ಪ್ರಕಟಿಸಿದೆ. ಇಂದು ನಡೆಯಲಿರುವ ಕಾರ್ಯಕ್ರಮಕ್ಕೆ ಗೈರಾದರೆ, ಅವರನ್ನು ದೇಶದ ನೂತನ ಮಿಲಿಟರಿ ಮುಖಂಡರ ವಿರುದ್ಧದ ದಂಗೆಕೋರರು ಎಂದು ಪರಿಗಣಿಸುವ ಎಚ್ಚರಿಕೆ ರವಾನಿಸಲಾಗಿದೆ.
ಈ ಬೆಳವಣಿಗೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್, ಬಂದೂಕಿನ ಬಲದಿಂದ ಯಾವುದೇ ಸರ್ಕಾರವನ್ನು ವಶಕ್ಕೆ ಪಡೆಯುವುದನ್ನು ಖಂಡಿಸುವುದಾಗಿ ಟ್ವಿಟಿಸಿದ್ದಾರೆ.
ಅಶಾಂತಿಯ ವಾತಾವರಣ ಸೃಷ್ಟಿ ಮತ್ತು ಸಂವಿಧಾನದ ಹೊರತಾದ ಕ್ರಮಗಳಿಗೆ ಮುಂದಾಗದಂತೆ ಗಿನಿಯಾದ ಆಡಳಿತಕ್ಕೆ ಅಮೆರಿಕ ಆಗ್ರಹಿಸಿದೆ.
ಅಧ್ಯಕ್ಷ ಆಲ್ಫಾ ಕೊಂಡೆ ಅವರನ್ನು ಸೇನೆಯು ತನ್ನ ವಶದಲ್ಲಿರಿಸಿಕೊಂಡಿದ್ದು, ಅವರು ತಮ್ಮ ವೈದ್ಯರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಸೇನಾಡಳಿತ ತಿಳಿಸಿದೆ. ಅವರನ್ನು ಬಿಡುಗಡೆ ಮಾಡುವ ಸಂಬಂಧ ಸಮಯ ನಿಗದಿ ಪಡಿಸದ ಸೇನಾಡಳಿತ, 'ಸಮಯ ಬಂದಾಗ ನಾವು ಪ್ರಕಟಣೆ ಹೊರಡಿಸುತ್ತೇವೆ' ಎಂದಷ್ಟೇ ಹೇಳಿದೆ.
ಸುಮಾರು ಹತ್ತು ವರ್ಷಗಳಿಗೂ ಹೆಚ್ಚು ಅವಧಿಯಿಂದ ಆಲ್ಫಾ ಕೊಂಡೆ ಗಿನಿಯಾದ ಚುಕ್ಕಾಣಿ ಹಿಡಿದಿದ್ದರು. ಕಳೆದ ವರ್ಷ ಅವರು ಮೂರನೇ ಅವಧಿಗೆ ಅಧಿಕಾರ ಮುಂದುವರಿಸುವುದಾಗಿ ಘೋಷಿಸಿದ ಬಳಿಕ ಅವರ ಜನಪ್ರಿಯತೆಯು ಕುಸಿದಿತ್ತು. ತನಗೆ ಅಧಿಕಾರದ ಕಾಲಾವಧಿ ಅನ್ವಯವಾಗುವುದಿಲ್ಲ ಎಂದು ಆಲ್ಫಾ ಪ್ರಕಟಿಸಿದ್ದರು.
ಫ್ರಾನ್ಸ್‌ನಿಂದ 1958ರಲ್ಲಿ ಸ್ವಾತಂತ್ರ್ಯ ಪಡೆದ ಗಿನಿಯಲ್ಲಿ ಈವರೆಗೂ ಆರ್ಥಿಕತೆ ಚೇತರಿಕೆ ಕಂಡಿಲ್ಲ. ಇದಕ್ಕೆ ಅಧಿಕಾರದಲ್ಲಿದ್ದ ಮುಖಂಡರೇ ಕಾರಣ ಎಂದು ಸೇನೆಯ ಕರ್ನಲ್ ಆರೋಪಿಸಿದ್ದು, 'ನಮ್ಮ ನಾಡಿನ ರಸ್ತೆಗಳನ್ನು ನೋಡಿದರೆ, ನಮ್ಮ ಆಸ್ಪತ್ರೆಗಳ ಸ್ಥಿತಿಯನ್ನು ಕಂಡರೆ, 72 ವರ್ಷಗಳ ನಂತರ ಈಗ ಎಚ್ಚೆತ್ತುಕೊಳ್ಳುವ ಸಮಯ ಬಂದಿದೆ ಎಂಬುದು ನಿಮಗೆ ಅರಿವಾಗುತ್ತದೆ' ಎಂದಿದ್ದಾರೆ.
ಈ ಹಿಂದೆ ಆಲ್ಫಾ ಕೊಂಡೆ ಅವರ ಹತ್ಯೆಗೆ ಹಲವು ಬಾರಿ ಪ್ರಯತ್ನ ನಡೆದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.