ಮೊಗದಿಶು (ಎಪಿ): ಸೋಮಾಲಿಯಾ ರಾಜಧಾನಿ ಮೊಗದಿಶುವಿನಲ್ಲಿ ಎರಡು ಪ್ರತ್ಯೇಕ ಜನನಿಬಿಡ ಪ್ರದೇಶದಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಪ್ರಮುಖ ಸರ್ಕಾರಿ ಕಚೇರಿಗಳಿದ್ದ ಸ್ಥಳದ ಹತ್ತಿರವೇ ಸ್ಫೋಟಗಳು ಸಂಭವಿಸಿದ್ದು, ಹಲವಾರು ನಾಗರಿಕರು ಮೃತಪಟ್ಟಿದ್ದಾರೆ ಎಂದು ಅಲ್ಲಿಯ ಪೊಲೀಸರು ತಿಳಿಸಿದ್ದಾರೆ.
ಎರಡು ಕಾರ್ ಬಾಂಬ್‌ಗಳನ್ನು ಸ್ಫೋಟಿಸಲಾಗಿದೆ ಎಂದು ಪೊಲೀಸ್ ವಕ್ತಾರರೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಸೋಮಾಲಿಯಾದ ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಮೊದಲ ಸ್ಪೋಟದಲ್ಲಿ ಸಾರ್ವಜನಿಕ ಸಾರಿಗೆಯಲ್ಲಿ ಸಂಚರಿಸುತ್ತಿದ್ದ ಹಲವರು ಮೃತಪಟ್ಟಿರುವುದು ಕಂಡುಬಂದಿದೆ. ಎರಡನೇ ಸ್ಫೋಟವು ಪ್ರಸಿದ್ಧ ಹೋಟೆಲ್ ಒಂದರ ಎದುರು ಸಂಭವಿಸಿದೆ. ಯಾವುದೇ ಸಂಘಟನೆಯು ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಉಗ್ರ ಸಂಘಟನೆಯಾದ ಅಲ್–ಖೈದಾ ಮತ್ತು ಅದರ ಅಂಗಸಂಸ್ಥೆ ಅಲ್–ಶಾಬಾದ್‌ದನ್ನು ಹತ್ತಿಕ್ಕುವ ಕುರಿತು ಚರ್ಚೆ ನಡೆಸಲು ದೇಶದ ಪ್ರಧಾನಿ, ಅಧ್ಯಕ್ಷ ಮತ್ತು ಇತರ ಅಧಿಕಾರಿಗಳು ಸಭೆ ನಡೆಸಿದ ದಿನವೇ ಈ ದಾಳಿ ನಡೆದಿದೆ.
ಈಚಿನ ದಿನಗಳಲ್ಲಿ ಮೊಗದಿಶು ನಗರವು ಹಲವು ಬಾರಿ ಅಲ್–ಶಾಬಾದ್ ಸಂಘಟನೆಯಿಂದ ದಾಳಿಗೊಳಗಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.