ADVERTISEMENT

ಘೇಂಡಾಮೃಗ ಬೇಟೆ ತಡೆಯಲು ವಿಕಿರಣ ತಂತ್ರಜ್ಞಾನ ಬಳಕೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2024, 0:27 IST
Last Updated 29 ಜೂನ್ 2024, 0:27 IST
<div class="paragraphs"><p>ಘೇಂಡಾಮೃಗ</p></div>

ಘೇಂಡಾಮೃಗ

   

(ರಾಯಿಟರ್ಸ್ ಚಿತ್ರ)

ಮೂಕೊಪೆನ್ (ದಕ್ಷಿಣ ಆಫ್ರಿಕಾ): ಘೇಂಡಾ ಮೃಗಗಳ ಬೇಟೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ದಕ್ಷಿಣ ಆಫ್ರಿಕಾದ ಸಂಶೋಧಕರ ತಂಡವೊಂದು ಸಂಶೋಧನೆಯ ಭಾಗವಾಗಿ 20 ಘೇಂಡಾಮೃಗಗಳ ಕೊಂಬುಗಳಿಗೆ ವಿಕಿರಣ ವಸ್ತುಗಳನ್ನು ಚುಚ್ಚಿದ್ದಾರೆ.

ADVERTISEMENT

ರಾಷ್ಟ್ರೀಯ ಗಡಿಗಳಲ್ಲಿ ವಿಕಿರಣ ಪತ್ತೆಹಚ್ಚುವ ವಿಧಾನ ಈಗಾಗಲೇ ಬಳಕೆಯಲ್ಲಿದ್ದು, ಕಳ್ಳ ಸಾಗಣೆದಾರರು, ಬೇಟೆಗಾರರನ್ನು ಬಂಧಿಸಲು ಇದು ನೆರವಾಗುತ್ತದೆ. 

ಪಶುವೈದ್ಯರು, ಪರಮಾಣು ತಜ್ಞರ ತಂಡ ಒಳಗೊಂಡ ಸಂಶೋಧಕರ ಗುಂಪು, ಘೇಂಡಾಮೃಗದ ಕೊಂಬುಗಳನ್ನು ಕೊರೆದು, ಅತ್ಯಂತ ಜಾಗರೂಕತೆಯಿಂದ ವಿಕಿರಣಶೀಲ ವಸ್ತುಗಳನ್ನು ಸೇರಿಸಿದ್ದಾರೆ.

ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನ ವಿಟ್‌ವಾಟರ್‌ಸ್ರ್ಯಾಂಡ್‌ ವಿಶ್ವವಿದ್ಯಾಲಯದ ವಿಕಿರಣ ಹಾಗೂ ಆರೋಗ್ಯ ಭೌತವಿಜ್ಞಾನ ಘಟಕದ ಸಂಶೋಧಕರ ತಂಡವು 20 ಜೀವಂತ ಘೇಂಡಾಮೃಗಗಳಿಗೆ ವಿಕಿರಣ ವಸ್ತುಗಳನ್ನು ಚುಚ್ಚಿದ್ದಾರೆ. ಇದೇ ರೀತಿ ಬೇಟೆಗೆ ಗುರಿಯಾಗುವ ಆನೆ, ಪ್ಯಾಂಗೋಲಿನ್‌ನಂತಹ ಪ್ರಾಣಿಗಳನ್ನು ಉಳಿಸಲು ಇದೇ ಮಾದರಿಯನ್ನು ಅನುಸರಿಸಬಹುದು ಎಂದು ತಂಡ ತಿಳಿಸಿದೆ. 

‘ಪರಮಾಣು ಭಯೋತ್ಪಾದನೆ ತಡೆಯಲು ವಿನ್ಯಾಸಗೊಳಿಸಲಾದ ವಿಕಿರಣ ತಡೆ ವಿಧಾನಗಳ ಮೂಲಕ ಅಂತರರಾಷ್ಟ್ರೀಯ ಗಡಿಯಲ್ಲಿ ಇಂತಹ ಕೊಂಬುಗಳನ್ನು ಅತ್ಯಂತ ಸುಲಭವಾಗಿ ಪತ್ತೆ ಮಾಡಬಹುದು’ ಎಂದು ಯೋಜನೆಯ ನೇತೃತ್ವ ವಹಿಸಿರುವ ಪ್ರೊ. ಜೇಮ್ಸ್‌ ಲಾರ್ಕಿನ್‌ ತಿಳಿಸಿದರು.

ಪರಿಸರ ಸಂರಕ್ಷಣೆಗೆ ಅಂತರರಾಷ್ಟ್ರೀಯ ಒಕ್ಕೂಟದ ಅಂಕಿಅಂಶದ ಪ್ರಕಾರ, 20ನೇ ಶತಮಾನದ ಆರಂಭದಲ್ಲಿ ಜಾಗತಿಕ ಮಟ್ಟದಲ್ಲಿ ಘೇಂಡಾಮೃಗಗಳ ಸಂಖ್ಯೆ
5 ಲಕ್ಷದಷ್ಟಿತ್ತು. ಕಾಳಸಂತೆಯಲ್ಲಿ ಘೇಂಡಾಮೃಗಗಳ ಕೊಂಬಿಗೆ ಸಾಕಷ್ಟು ಬೇಡಿಕೆ ಕಂಡುಬಂದಿದ್ದರಿಂದ, ದೊಡ್ಡ ಪ್ರಮಾಣದಲ್ಲಿ ಅವುಗಳನ್ನು ಕೊಲ್ಲಲಾಗುತ್ತಿದ್ದು, ಈಗ ಅವುಗಳ ಸಂಖ್ಯೆ 27 ಸಾವಿರಕ್ಕೆ ಇಳಿಕೆಯಾಗಿದೆ. 

ದಕ್ಷಿಣ ಆಫ್ರಿಕಾವು ಇವುಗಳ ನೆಚ್ಚಿನ ಆವಾಸಸ್ಥಾನವಾಗಿದ್ದು, 16 ಸಾವಿರಕ್ಕೂ ಹೆಚ್ಚು ಘೇಂಡಾಮೃಗಗಳಿವೆ. ಕೊಂಬಿನ ಕಾರಣಕ್ಕಾಗಿಯೇ ಇಲ್ಲಿ ಕೂಡ ಪ್ರತೀ ವರ್ಷ 500ಕ್ಕೂ ಹೆಚ್ಚು ಘೇಂಡಾಮೃಗಗಳನ್ನು ಕೊಲ್ಲಲಾಗುತ್ತಿದೆ. 

2020ರ ಕೋವಿಡ್‌ ಸಂದರ್ಭದಲ್ಲಿ ಲಾಕ್‌ಡೌನ್‌ ನಿರ್ಬಂಧದಿಂದ ಘೇಂಡಾಮೃಗಗಳ ಹತ್ಯೆಯ ಸಂಖ್ಯೆ ತೀವ್ರ ಇಳಿಮುಖ ದಾಖಲಿಸಿತ್ತು. ನಿರ್ಬಂಧ ತೆರವುಗೊಳಿಸಿದ ಬಳಿಕ ಬೇಟೆ ಅವ್ಯಾಹತವಾಗಿ ಮುಂದುವರಿದಿತ್ತು. 

‘ಬೇಟೆಯನ್ನು ಕಡಿಮೆ ಮಾಡಲು ಅತ್ಯಂತ ವಿನೂತನ ಮಾದರಿ ಆಯ್ಕೆ ಮಾಡಿಕೊಳ್ಳಬೇಕಿದೆ’ ಎಂದು ತಿಳಿಸಿದ ಲಾರ್ಕಿನ್‌, ಕೋವಿಡ್‌ನಲ್ಲಿ ಇಳಿಕೆಯಾಗಿದ್ದ ಹತ್ಯೆ ಪ್ರಕರಣಗಳು ಬಳಿಕ ತೀವ್ರಗತಿಯಲ್ಲಿ ಏರಿಕೆ ದಾಖಲಿಸಿರುವುದನ್ನು ಕಾಣಬಹುದು ಎಂದು ಎಚ್ಚರಿಸಿದರು.

ಹೊಸ ವಿಧಾನಕ್ಕೆ ಉದ್ಯಮದಿಂದ ಕೆಲವರ ಬೆಂಬಲ ಪಡೆದಿದ್ದರೂ ಕೂಡ ಜಾರಿ ವಿಧಾನದ ಕುರಿತು ಅನೇಕ ನೈತಿಕ ಪ್ರಶ್ನೆಗಳನ್ನು ಎದುರಿಸುವಂತಾಯಿತು.

ಖಾಸಗಿ ಘೇಂಡಾಮೃಗಗಳ ಮಾಲೀಕರ ಸಂಘದ ಅಧ್ಯಕ್ಷ ಪೆಲ್ಹಾಮ್‌ ಜೋನ್ಸ್ ಮಾತನಾಡಿ, ‘ಕಳ್ಳಬೇಟೆಗಾರರನ್ನು ಅತ್ಯಂತ ಪರಿಣಾಮಕಾರಿಯಾಗಿ ಪತ್ತೆಹಚ್ಚಲು ಹೊಸ ವಿಧಾನ ಯಶಸ್ವಿಯಾಗುವ ಅನುಮಾನವಿದೆ’ ಎಂದು ತಿಳಿಸಿದ್ದಾರೆ.

‘ಕೊಂಬುಗಳನ್ನು ದೇಶದಿಂದ ಮತ್ತೊಂದು ದೇಶಕ್ಕೆ ಕೊಂಡೊಯ್ಯಲು ಬೇಟೆಗಾರರು ಅನ್ಯಮಾರ್ಗ ಅನುಸರಿಸುವ ಸಾಧ್ಯತೆಯಿದೆ. ಈಗಿನಂತೆ ಸಾಂಪ್ರದಾಯಿಕ ಗಡಿದಾಟುವ ವಿಧಾನ ಅನುಸರಿಸಲಾರರು. ಈಗಿನಂತೆ ಕೊಂಡೊಯ್ದರೆ, ಹೆಚ್ಚಿನ ಅಪಾಯ ತಂದುಕೊಳ್ಳಬೇಕಾದ ಅರಿವು ಹೊಂದಿರುತ್ತಾರೆ’ ಎಂದು ಎಚ್ಚರಿಸಿದ್ದಾರೆ.

‘ಕೊಂಬುಗಳಿಗೆ ಹಾಕುವ ವಿಕಿರಣಶೀಲ ಅತ್ಯಂತ ಸಣ್ಣ ಪ್ರಮಾಣದ್ದಾಗಿದ್ದು, ಪ್ರಾಣಿಗಳ ಮೇಲೆ ಸಂಭಾವ್ಯ ಋಣಾತ್ಮಕ ಪರಿಣಾಮವನ್ನು ಸಾಕಷ್ಟು ಪರೀಕ್ಷೆಗೆ ಒಳಪಡಿಸಲಾಗಿದೆ’ ಎಂದು ವಿಶ್ವವಿದ್ಯಾಲಯದ ವಿಜ್ಞಾನ ವಿಭಾಗದ ಡೀನ್ ನಿತ್ಯಾ ಚೆಟ್ಟಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.