ಮ್ಯಾಡ್ರಿಡ್: ಸ್ಪೇನ್‌ನಲ್ಲಿ ಕೊರೊನಾ ವೈರಸ್ ಸೋಂಕು ರುದ್ರಾವತಾರ ತಾಳಿದೆ. ಪರಿಸ್ಥಿತಿ ನಿರ್ವಹಿಸಲು ಸಾಧ್ಯವಾಗದೇ ಪರದಾಡುತ್ತಿರುವ ಅಲ್ಲಿನ ಸರ್ಕಾರ ಚೀನಾದ ಮೊರೆ ಹೋಗಿದೆ. ಅತ್ಯಗತ್ಯ ವೈದ್ಯಕೀಯ ವಸ್ತುಗಳ ತುರ್ತು ಪೂರೈಕೆಗೆ ಒಪ್ಪಂದ ಮಾಡಿಕೊಂಡಿದೆ.
ಸ್ಪೇನ್ ದೇಶದ ವಿವಿಧೆಡೆ ಬುಧವಾರ ಒಂದೇ ದಿನ 738 ಮಂದಿ ಕೋವಿಡ್-19ಗೆ ಬಲಿಯಾಗಿದ್ದಾರೆ. ಸ್ಪೇನ್‌ನಲ್ಲಿ ಸೋಂಕಿನಿಂದ ಈವರೆಗೆ ಮೃತಪಟ್ಟವರ ಸಂಖ್ಯೆ 3,434 ಮುಟ್ಟಿದೆ. ಈ ಮೂಲಕ ಕೊರೊನಾ ಸಾವಿನ ಸಂಖ್ಯೆಯಲ್ಲಿ ಸ್ಪೇನ್ ಚೀನಾವನ್ನು ಹಿಂದಿಕ್ಕಿದೆ.
ಚೀನಾದಲ್ಲಿ ವೈರಸ್ ಸೋಂಕಿನಿಂದ ಈವರೆಗೆ ಮೃತಪಟ್ಟವರ ಸಂಖ್ಯೆ 3,285. ವಿಶ್ವದಲ್ಲಿ ಅತಿಹೆಚ್ಚು ಕೊರೊನಾ ಸೋಂಕು ಸಾವು ಪ್ರಕರಣಗಳು ವರದಿಯಾಗಿರುವ ಇಟಲಿಯಲ್ಲಿ ಮೃತರ ಸಂಖ್ಯೆ 6,820 ಮುಟ್ಟಿದೆ.
ಸ್ಪೇನ್‌ನ47,610 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಚಿಕಿತ್ಸೆ ನೀಡಲು ಇರುವ ವೈದ್ಯಕೀಯ ಸೌಲಭ್ಯಗಳು ಸಾಲುತ್ತಿಲ್ಲ. ತರಾತುರಿಯಲ್ಲಿ ಹೊಸ ಚಿಕಿತ್ಸಾ ಕೇಂದ್ರಗಳನ್ನು ನಿರ್ಮಿಸಲು ಸರ್ಕಾರ ಕ್ರಮತೆಗೆದುಕೊಂಡಿದೆ. ಆದರೆ5400 ವೈದ್ಯಕೀಯ ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಆರೋಗ್ಯ ಸೇವೆಗಳು ನೆಲಕಚ್ಚಿವೆ.
ಸತ್ತವರ ಶವ ಸಂಸ್ಕಾರವನ್ನು ಅದೇ ದಿನ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಐಸ್ ಸ್ಕೇಟಿಂಗ್ ರಿಂಗ್‌ಗಳನ್ನೇ ಅಲ್ಲಿನ ಅಧಿಕಾರಿಗಳು ತಾತ್ಕಾಲಿಕ ಶವಾಗಾರಗಳಾಗಿ ಪರಿವರ್ತಿಸಿದ್ದಾರೆ.
ಸ್ಪೇನ್‌ನಲ್ಲಿ ವಿಧಿಸಿರುವ ತುರ್ತು ಪರಿಸ್ಥಿತಿಯನ್ನು ಇನ್ನೂ ಎರಡು ವಾರಗಳ ಅವಧಿಗೆ ವಿಸ್ತರಿಸಲು ಅಲ್ಲಿನ ಪ್ರಧಾನಿ ಸಂಸದರ ಅನುಮೋದನೆ ಕೋರಿದರು. ಏಪ್ರಿಲ್ 11ರವರೆಗೆ ಜನರು ಮನೆಬಿಟ್ಟು ಹೊರಬರಬಾರದು ಎಂದು ಅಲ್ಲಿನ ಪ್ರಧಾನಿ ಆದೇಶ ಹೊರಡಿಸಿದ್ದಾರೆ.
ಸ್ಪೇನ್ ಕೆಲ ವೃದ್ಧಾಶ್ರಮಗಳಲ್ಲಿ ಮೃತರನ್ನು ಹಾಸಿಗೆಯಲ್ಲಿಯೇ ಬಿಟ್ಟು ಸಹವರ್ತಿಗಳು, ಅಧಿಕಾರಿಗಳುಓಡಿಹೋಗಿದ್ದ ಪ್ರಕರಣಗಳು ಬೆಳಕಿಗೆ ಬಂದಿವೆ. ಪರಿಸ್ಥಿತಿ ನಿಯಂತ್ರಿಸಲು ಸೇನೆಯನ್ನು ನಿಯೋಜಿಸಲಾಗಿದೆ.
ಅಗತ್ಯ ವೈದ್ಯಕೀಯ ವಸ್ತುಗಳ ತೀವ್ರ ಕೊರತೆ ಎದುರಿಸುತ್ತಿರುವ ಸ್ಪೇನ್ ಸರ್ಕಾರವು ಚೀನಾ ಮೊರೆ ಹೋಗಿದೆ. ಚೀನಾ ಸರ್ಕಾರದ ಜೊತೆಗೆ 432 ದಶಲಕ್ಷ ಯೂರೊ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದೆ. 55 ಕೋಟಿ ಮಾಸ್ಕ್‌ಗಳು, 55 ಲಕ್ಷ ಟೆಸ್ಟ್ ಕಿಟ್‌ಗಳು, 950 ರೆಸ್ಪಿರೇಟರ್‌ಗಳು ಮತ್ತು 11 ಲಕ್ಷ ಜೊತೆ ಕೈಗವಸುಗಳ ಖರೀದಿಗೆ ನಿರ್ಧರಿಸಲಾಗಿದೆ ಎಂದು ಆರೋಗ್ಯ ಸಚಿವ ಸಾಲ್ವಡೋರ್ ಇಲ್ಲಾ ಹೇಳಿದ್ದಾರೆ.
ವಿಶ್ವದ ವಿವಿಧೆಡೆ ಈವರೆಗೆ 4,40,000 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿವೆ. ಸತ್ತವರ ಒಟ್ಟು ಸಂಖ್ಯೆ 20,000 ಮುಟ್ಟಿದೆ. ಸೋಂಕು ತಗುಲಿ ಗುಣಮುಖರಾದವರ ಸಂಖ್ಯೆ 1 ಲಕ್ಷ ಎಂದು ಜಾನ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯ ಅಂದಾಜು ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.