ADVERTISEMENT

ಟ್ರಂಪ್‌ ವಿರುದ್ಧದ ಪ್ರಕರಣ ಕೈಬಿಡಲು ಮುಂದಾದ ಪ್ರಾಸಿಕ್ಯೂಟರ್‌

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2024, 14:06 IST
Last Updated 26 ನವೆಂಬರ್ 2024, 14:06 IST
ಡೊನಾಲ್ಡ್‌ ಟ್ರಂಪ್‌– ಎಎಫ್‌ಪಿ
ಡೊನಾಲ್ಡ್‌ ಟ್ರಂಪ್‌– ಎಎಫ್‌ಪಿ   

ವಾಷಿಂಗ್ಟನ್‌: ಶ್ವೇತಭವನದ ರಹಸ್ಯ ದಾಖಲೆಗಳನ್ನು ಅಧಿಕಾರ ಅವಧಿ ಮುಗಿದ ನಂತರ ತಮ್ಮ ಖಾಸಗಿ ನಿವಾಸಕ್ಕೆ ಕೊಂಡೊಯ್ದಿದ್ದರು ಎಂಬ ಆರೋಪದಡಿ ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ದಾಖಲಾಗಿದ್ದ ಪ್ರಕರಣ ಕೈಬಿಡಲು ಫೆಡರಲ್ ಪ್ರಾಸಿಕ್ಯೂಟರ್‌ಗಳು ಮುಂದಾಗಿದ್ದಾರೆ.

ಅಧಿಕಾರದಲ್ಲಿ ಇರುವಾಗ ಅಧ್ಯಕ್ಷರಿಗೆ ಪ್ರಾಸಿಕ್ಯೂಷನ್‌ನಿಂದ ರಕ್ಷಣೆ ಇದೆ. ಹಾಗಾಗಿ, ಈ ಪ್ರಕರಣವನ್ನು ಕೈಬಿಡುವ ನಿರ್ಧಾರಕ್ಕೆ ಪ್ರಾಸಿಕ್ಯೂಟರ್‌ಗಳು ಬಂದಿದ್ದಾರೆ.

2020ರ ಚುನಾವಣಾ ಫಲಿತಾಂಶವನ್ನು ತಿರುಚಲು ಯತ್ನಿಸಿದ್ದರು ಎಂದು ಆರೋಪಿಸಿ ಹೂಡಿದ್ದ ಮೊಕದ್ದಮೆಯನ್ನು ವಜಾಗೊಳಿಸುವಂತೆ ಪ್ರಾಸಿಕ್ಯೂಟರ್‌ಗಳು ವಾಷಿಂಗ್ಟನ್‌ ಡಿ.ಸಿಯ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು. ಇದರ ಬೆನ್ನಲ್ಲೇ, ಫ್ಲಾರಿಡಾದ ಮೇಲ್ಮನವಿ ನ್ಯಾಯಾಲಯದಲ್ಲಿ ರಹಸ್ಯ ದಾಖಲೆಗಳಿಗೆ ಸಂಬಂಧಿಸಿದ ಪ್ರಕರಣ ವಜಾಗೊಳಿಸುವ ಮನವಿಯನ್ನು ಪ್ರಾಸಿಕ್ಯೂಟರ್‌ಗಳು ಸಲ್ಲಿಸಿದರು.

ADVERTISEMENT

2021ರ ಜನವರಿ 6ರಂದು ಅಮೆರಿಕದ ಸಂಸತ್‌ ಮೇಲೆ ಟ್ರಂಪ್‌ ಬೆಂಬಲಿಗರು ನಡೆಸಿದ ದಾಳಿಯು ಅಧಿಕಾರ ಹಿಡಿದಿಟ್ಟುಕೊಳ್ಳುವ ಕ್ರಿಮಿನಲ್ ಪಿತೂರಿ ಎಂದು ಆರೋಪಿಸಿ, ಇದಕ್ಕೆ ಟ್ರಂಪ್‌ ಅವರನ್ನು ಹೊಣೆಯಾಗಿಸಲು ಮುಂದಾಗಿದ್ದ ನ್ಯಾಯಾಂಗ ಇಲಾಖೆಯ ಪ್ರಯತ್ನಕ್ಕೆ ಪ್ರಾಸಿಕ್ಯೂಟರ್‌ಗಳ ಈ ಕ್ರಮವು ಇತಿಶ್ರೀ ಹಾಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.