ದುಬೈ/ ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಮಿಲಿಟರಿ ಆಡಳಿತಗಾರ ಪರ್ವೇಜ್ ಮುಷರಫ್ ಅವರ ಅಂತ್ಯಸಂಸ್ಕಾರವು ಮಂಗಳವಾರ ಕರಾಚಿಯ ಗುಲ್ ಮೊಹರ್ ಪೊಲೊ ಮೈದಾನದಲ್ಲಿ ನಡೆಯಲಿದೆ ಎಂದು ಕುಟುಂಬವು ಖಚಿತಪಡಿಸಿರುವುದಾಗಿ ‘ಎಕ್ಸಪ್ರೆಸ್ ಟ್ರಿಬ್ಯೂನ್’ ವರದಿ ಮಾಡಿದೆ.
ವಿಮಾನ ವಿಳಂಬ: ಮುಷರಫ್ ಅವರ ಪಾರ್ಥಿವ ಶರೀರವನ್ನು ಸ್ವದೇಶಕ್ಕೆ ಕೊಂಡೊಯ್ಯುವ ವಿಶೇಷ ವಿಮಾನವು ದುಬೈ ತಲುಪುವುದು ವಿಳಂಬವಾಗಿದೆ ಎಂದು ಮಾಧ್ಯಮಗಳು ಸೋಮವಾರ ವರದಿ ಮಾಡಿವೆ.
‘ವಿಮಾನವು ಸ್ಥಳೀಯ ಕಾಲಮಾನ 11.30ಕ್ಕೆ ದುಬೈನಿಂದ ಹೊರಡಬೇಕಿತ್ತು. ಆದರೆ ವಿಳಂಬ ಆಗಿದೆ’ ಎಂದು ಜಿಯೊ ಟಿ.ವಿ ವರದಿ ಮಾಡಿದೆ.
‘ಸೋಮವಾರ ಬೆಳಿಗ್ಗೆ ವಿಮಾನವು ದುಬೈನಿಂದ ಹೊರಡಲಿದೆ ಎಂದು ಹೇಳಲಾಗಿತ್ತು, ವಿಳಂಬಕ್ಕೆ ಕಾರಣ ತಿಳಿದುಬಂದಿಲ್ಲ’ ಎಂದು ಆಜ್ ನ್ಯೂಸ್ ತಿಳಿಸಿದೆ.
ಕಾರ್ಗಿಲ್ ಯುದ್ಧಕ್ಕೆ ಕಾರಣರಾಗಿದ್ದ ಪರ್ವೇಜ್ ಮುಷರಫ್ (79) ದುಬೈನಲ್ಲಿ ಭಾನುವಾರ ನಿಧನರಾದರು. ದೀರ್ಘ ಕಾಲದ ಅನಾರೋಗ್ಯದಿಂದಾಗಿ ಬಳಲುತ್ತಿದ್ದ ಅವರು ಚಿಕಿತ್ಸೆಗಾಗಿ 2016ರ ಮಾರ್ಚ್‌ನಲ್ಲಿ ದುಬೈಗೆ ತೆರಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.