ಕರಾಚಿ: ದೆಹಲಿಯಿಂದ ದುಬೈಗೆ ತೆರಳುತ್ತಿದ್ದ ಸ್ಪೈಸ್ ಜೆಟ್ ವಿಮಾನವು ಪಾಕಿಸ್ತಾನದ ಕರಾಚಿಯ ಜಿನ್ನಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದೆ.
ವಿಮಾನದ ಇಂಡಿಕೇಟರ್ ಲೈಟ್‌ನಲ್ಲಿ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕರಾಚಿಯಲ್ಲಿ ಲ್ಯಾಂಡಿಂಗ್ ಮಾಡಲಾಗಿದ್ದು, ಯಾವುದೇ ತುರ್ತು ಸಮಸ್ಯೆ ಇಲ್ಲ ಎಂದು ಸ್ಪೈಸ್ ಜೆಟ್ ತಿಳಿಸಿರುವುದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.
‘ಜುಲೈ 5 ರಂದು ಸ್ಪೈಸ್ ಜೆಟ್‌ನ ಎಸ್‌ಜಿ–11(ದೆಹಲಿ–ದುಬೈ) ಕಾರ್ಯಾಚರಣಾ ವಿಮಾನದ ಇಂಡಿಕೇಟರ್ ಲೈಟ್‌ನಲ್ಲಿ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಾರ್ಗವನ್ನು ಬದಲಿಸಿ ಕರಾಚಿಯಲ್ಲಿ ಇಳಿಸಲಾಗಿದೆ. ವಿಮಾನವು ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಿದೆ. ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದು, ವಿಮಾನದಿಂದ ಇಳಿದಿದ್ದಾರೆ. ಯಾವುದೇ ತುರ್ತು ಪರಿಸ್ಥಿತಿ ಘೋಷಣೆ ಮಾಡಿಲ್ಲ. ವಿಮಾನವು ಸಾಮಾನ್ಯ ಲ್ಯಾಂಡಿಂಗ್ ಮಾಡಿದೆ’ ಎಂದು ಸ್ಪೈಸ್ ಜೆಟ್ ಪ್ರಕಟಣೆಯಲ್ಲಿ ತಿಳಿಸಿದೆ.
‘ಈ ಮೊದಲು ವಿಮಾನದಲ್ಲಿ ಯಾವುದೇ ದೋಷದ ಬಗ್ಗೆ ವರದಿ ಬಂದಿರಲಿಲ್ಲ. ಪ್ರಯಾಣಿಕರಿಗೆ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ’ಎಂದು ಸ್ಪೈಸ್ ಜೆಟ್ ವಕ್ತಾರರು ತಿಳಿಸಿದ್ದಾರೆ.
ಕರಾಚಿಗೆ ಪರ್ಯಾಯ ವಿಮಾನ ಕಳುಹಿಸಲಾಗಿದ್ದು, ಪ್ರಯಾಣಿಕರನ್ನು ದುಬೈಗೆ ಕರೆದೊಯ್ಯಲಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.