ವಾಷಿಂಗ್ಟನ್: ಇಲ್ಲಿ ನೆಲೆಸಿರುವ ಭಾರತೀಯ ನಿವಾಸಿಗಳ ಮನೆಗಳನ್ನೇ ಗುರಿಯಾಗಿಸಿ ಸಂಘಟಿತವಾಗಿ ಕಳ್ಳತನಗಳು ನಡೆಯುತ್ತಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಇಲ್ಲಿನ ಸ್ನೋಹೋಮಿಶ್ ಕೌಂಟಿ ವ್ಯಾಪ್ತಿಯಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿರುವ ಪೊಲೀಸರು, ಕಳ್ಳರ ಸೆರೆಹಿಡಿಯಲು ನಾಗರಿಕರ ನೆರವನ್ನೂ ಕೋರಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿವೆ.
‘ಎರಡು ವಾರದಿಂದ ಕಳ್ಳತನಗಳು ಹೆಚ್ಚಾಗಿವೆ. ಕಳ್ಳರು ಸಂಘಟಿತವಾಗಿ ಭಾರತೀಯ ಅಮೆರಿಕನ್ನರ ಮನೆಗಳನ್ನೇ ಗುರಿಯಾಗಿಸುತ್ತಿದ್ದಾರೆ. ಇವರ ಪತ್ತೆ ಹಚ್ಚಲು ಸ್ಥಳೀಯ ನಿವಾಸಿಗಳು ಶಂಕಿತರ ಚಲನವಲನಗಳಿಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳನ್ನು ಒದಗಿಸುವಂತೆ’ ಪೊಲೀಸರು ಕೋರಿದ್ದಾರೆ.
‘ಸುರಕ್ಷಿತ ಎಂಬ ಕಾರಣಕ್ಕೆ ನಾವು ಎರಡು ತಿಂಗಳ ಹಿಂದೆ ಇಲ್ಲಿಗೆ ಸ್ಥಳಾಂತರಗೊಂಡೆವು. ಆದರೆ, ಇದು ಅಷ್ಟು ಸುರಕ್ಷಿತವಲ್ಲ ಎಂಬುದು ಈಗ ಅನಿಸುತ್ತಿದೆ’ ಎಂದು ಅನು ಎಂಬ ಮಹಿಳೆ ಪ್ರತಿಕ್ರಿಯಿಸಿದ್ದಾರೆ.
‘ನಮ್ಮ ಮನೆಯಲ್ಲಿ ಒಂದು ನಾಯಿ ಇದೆ. ಆದರೆ ಸುರಕ್ಷತೆ ದೃಷ್ಟಿಯಿಂದ ಕಾವಲಿಗಾಗಿ ಇನ್ನೊಂದು ನಾಯಿಯನ್ನು ತರಲು ಯೋಚಿಸುತ್ತಿದ್ದೇನೆ’ ಎಂದು ಅನು ಅವರ ಪತಿ ರಾಮ್ ಹೇಳಿದ್ದಾರೆ.
‘ಹೆಚ್ಚಿನ ಭಾರತೀಯ ಅಮೆರಿಕನ್ನರ ಬಳಿ ಇಲ್ಲಿನ ನಾಗರಿಕತ್ವ ಇಲ್ಲ. ಹೀಗಾಗಿ ಅವರು ಶಸ್ತ್ರಾಸ್ತ್ರಗಳನ್ನು ಹೊಂದಿರುವುದಿಲ್ಲ. ಇದನ್ನು ಅರಿತಿರುವ ಕಳ್ಳರು ಭಾರತೀಯ ಅಮೆರಿಕನ್ನರನ್ನು ಗುರಿಯಾಗಿಸಿರಬಹುದು’ ಎಂದು ಅವರು ಅನಮಾನ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.