ADVERTISEMENT

ದೇಶ ವಿಭಜನೆಯ ಏಳೂವರೆ ದಶಕಗಳ ಬಳಿಕ ಒಡಹುಟ್ಟಿದವರ ಭೇಟಿ!

ಅನಿರ್ಬನ್ ಭೌಮಿಕ್
Published 29 ಜನವರಿ 2022, 4:55 IST
Last Updated 29 ಜನವರಿ 2022, 4:55 IST
ವೀಸಾ ದೊರಕಿದ ಸಂತಸದಲ್ಲಿ ಸಿಕಾ ಖಾನ್
ವೀಸಾ ದೊರಕಿದ ಸಂತಸದಲ್ಲಿ ಸಿಕಾ ಖಾನ್   

ನವದೆಹಲಿ: 1947ರಲ್ಲಿ ಭಾರತ ವಿಭಜನೆ ಮತ್ತು ಹೊಸ ಪಾಕಿಸ್ತಾನ ರಾಷ್ಟ್ರ ಹುಟ್ಟಿದ ಏಳೂವರೆ ದಶಕಗಳ ಬಳಿಕ ಸಹೋದರರಿಬ್ಬರು ಮತ್ತೆ ಭೇಟಿಯಾಗಲು ತಯಾರಾಗಿದ್ದಾರೆ.

ಭಾರತ-ಪಾಕಿಸ್ತಾನ ವಿಭಜನೆಯು ಒಡಹುಟ್ಟಿದ ಸಿಕಾ ಖಾನ್ ಹಾಗೂ ಮೊಹಮ್ಮದ್ ಸಿದ್ಧಿಕಿ ಅವರನ್ನು ಇನ್ನೆಂದೂ ಭೇಟಿಯಾಗಲು ಸಾಧ್ಯವಾಗದ ರೀತಿಯಲ್ಲಿ ಬೇರ್ಪಡಿಸಿತ್ತು.

ಈಗ ಪಾಕಿಸ್ತಾನದಲ್ಲಿರುವ ತಮ್ಮ ಸೋದರ 84 ವರ್ಷದ ಮೊಹಮ್ಮದ್ ಸಿದ್ಧಿಕಿ ಅವರನ್ನು ಭೇಟಿ ಮಾಡಲು 76 ವರ್ಷದ ಸಿಕಾ ಖಾನ್ ಅವರಿಗೆ ಭಾರತದಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿಯು ವೀಸಾ ಒದಗಿಸಿದೆ.

'ವೀಸಾ ಸಿಕ್ಕಿರುವುದು ತುಂಬಾನೇ ಸಂತಸವಾಗಿದೆ. ನಾನೀಗ ಪಾಕಿಸ್ತಾನಕ್ಕೆ ಹೋಗಿ ನನ್ನ ಸಹೋದರ ಮತ್ತು ಕುಟುಂಬ ಸದಸ್ಯರನ್ನು ಭೇಟಿಯಾಗಲಿದ್ದೇನೆ' ಎಂದು ಸಿಕಾ ಪ್ರತಿಕ್ರಿಯಿಸಿದ್ದಾರೆ.

ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ಕೆಲವೇ ಗಂಟೆಗಳ ಮೊದಲು ಹೊಸ ಪಾಕಿಸ್ತಾನ ದೇಶ ಹುಟ್ಟಿದ ವೇಳೆಯಲ್ಲಿ ಸಿಕಾ ಹಾಗೂ ಸಿದ್ಧಿಕಿ ಬೇರ್ಪಟ್ಟಿದ್ದರು.

ಸ್ವಾತಂತ್ರ್ಯ ಸಿಗುವ ಕೆಲವೇ ದಿನಗಳ ಮೊದಲು ಇಬ್ಬರು ಮಕ್ಕಳು ಪಂಜಾಬ್‌ನ ತಾಯಿ ಗ್ರಾಮ ಫುಲೆವಾಲಾದಲ್ಲಿದ್ದರು. ಆದರೆ ದೇಶದ ವಿಭಜನೆಯ ಸ್ವಲ್ಪ ಮೊದಲು ತಂದೆ, ಸಿದ್ಧಿಕಿರನ್ನು ಪೂರ್ವಜರ ಗ್ರಾಮ ಬೋಗ್ರಾನ್‌ಗೆ ಕೊಂಡೊಯ್ದರು. ಆ ಸ್ಥಳ ಶೀಘ್ರದಲ್ಲೇ ಪಾಕಿಸ್ತಾನ ಪಂಜಾಬ್‌ನ ಭಾಗವಾಯಿತು.

ಅತ್ತ ಎರಡು ವರ್ಷದ ಸಿಕಾ ತಾಯಿಯೊಂದಿಗೆ ಭಾರತದಲ್ಲೇ ಇದ್ದರು. ವಿಭಜನೆಯ ಬಳಿಕ ಸಾಮೂಹಿಕ ವಲಸೆ ಹಾಗೂ ಕೋಮು ಗಲಭೆಯಿಂದಾಗಿ ಪುನರ್ಮಿಲನ ಯೋಗ ಕೂಡಿ ಬಂದಿರಲಿಲ್ಲ.

ಬಳಿಕ ತಂದೆ ಪಾಕಿಸ್ತಾನದಲ್ಲಿ ನಿಧನರಾದರು. ಗಂಡನ ಸಾವಿನ ಸುದ್ದಿ ತಿಳಿದ ಪತ್ನಿ ಕೆಲವು ದಿನಗಳ ಬಳಿಕ ಆತ್ಮಹತ್ಯೆ ಮಾಡಿಕೊಂಡರು. ಪರಿಣಾಮ ಇಬ್ಬರು ಗಡಿಯ ಎರಡು ಬದಿಗಳಲ್ಲಿ ಜೀವನ ಸಾಗಿಸಬೇಕಾಯಿತು.

2019ರಲ್ಲಿ ಪಾಕಿಸ್ತಾನದ ಯೂಟ್ಯೂಬರ್ ನಾಸಿರ್ ದಿಲ್ಲಾನ್, ಸಿದ್ದಿಕಿ ವಾಸಿಸುತ್ತಿದ್ದ ಗ್ರಾಮಕ್ಕೆ ಭೇಟಿ ನೀಡಿ ಈ ಕುರಿತು ವಿಡಿಯೊ ಪೋಸ್ಟ್ ಮಾಡಿದ್ದರು. ಬಳಿಕ ಭಾರತದ ಫುಲೇವಾಲಾದ ಗ್ರಾಮೀಣ ವೈದ್ಯಾಧಿಕಾರಿ ಜಗಸಿರ್ ಸಿಂಗ್ ಅವರು ದಿಲ್ಲಾನ್ ಅವರನ್ನು ಸಂಪರ್ಕಿಸಿ ಇಬ್ಬರು ಸಹೋದರರ ನಡುವೆ ವಿಡಿಯೊ ಕರೆ ನಡೆಸಲು ನೆರವಾದರು.

ಕೆಲವು ದಿನಗಳ ಹಿಂದೆ ಸಿಕಾ ಹಾಗೂ ಸಿದ್ಧಿಕಿ ಕರ್ತಾರಪುರ ಕಾರಿಡಾರ್‌ನಲ್ಲಿ ಭೇಟಿಯಾಗಿದ್ದರು. 2019ರಲ್ಲಿ ಭಾರತದಿಂದ ಯಾತ್ರಿಕರು ಪಾಕಿಸ್ತಾನದ ಗಡಿ ದಾಟಿ ಗುರುದ್ವಾರ ದರ್ಬಾರ್ ಸಾಹಿಬ್‌ಗೆ ಭೇಟಿ ನೀಡಲು ಅನುಕೂಲವಾಗುವಂತೆ ಕರ್ತಾರ್‌ಪುರ ಕಾರಿಡಾರ್ ಅನ್ನು ತೆರೆಯಲಾಗಿತ್ತು.

ಈಗ ವೀಸಾ ದೊರಕಿರುವ ಸಿಕಾ, ಪಾಕಿಸ್ತಾನಕ್ಕೆ ತೆರಳಿ ತಮ್ಮ ಸೋದರನನ್ನು ಭೇಟಿಯಾಗಲು ಸಜ್ಜಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.