ವಾಷಿಂಗ್ಟನ್: ಎಚ್ -1ಬಿ ವೀಸಾ ಹೊಂದಿರುವ ಉದ್ಯೋಗಿಗಳ ಸಂಗಾತಿ ಕೂಡ ಅಮೆರಿಕದಲ್ಲಿ ನೌಕರಿ ಮಾಡಬಹುದು ಎಂಬ ಮಹತ್ವದ ತೀರ್ಪನ್ನು ಇಲ್ಲಿನ ನ್ಯಾಯಾಲಯ ನೀಡಿದೆ.
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಭಾರತೀಯ ಉದ್ಯೋಗಿಗಳಿಗೆ ಈ ತೀರ್ಪಿನಿಂದ ಸಾಕಷ್ಟು ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
‘ಸೇವ್ ಜಾಬ್ಸ್ ಯುಎಸ್‌ಎ’ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ಅಮೆರಿಕದ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶೆ ತಾನ್ಯಾ ಚುಟ್ಕನ್ ಈ ತೀರ್ಪು ನೀಡಿದ್ದಾರೆ.
ಎಚ್ -1 ಬಿ ವೀಸಾ ಹೊಂದಿರುವ ವಿದೇಶಗಳ ನುರಿತ ತಂತ್ರಜ್ಞರು, ಶೈಕ್ಷಣಿಕ ವಲಯದ ವೃತ್ತಿಪರರು, ನಿರ್ದಿಷ್ಟ ಕ್ಷೇತ್ರದ ವಿಶೇಷ ಪರಿಣತರ ಸಂಗಾತಿಗಳು ಅಮೆರಿಕದಲ್ಲಿ ಉದ್ಯೋಗ ಮಾಡಲು ಬರಾಕ್ ಒಬಾಮ ಆಡಳಿತಾವಧಿಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಇದನ್ನು ವಿರೋಧಿಸಿ ‘ಸೇವ್ ಜಾಬ್ಸ್ ಯುಎಸ್‌ಎ’ ನ್ಯಾಯಾಲಯದ ಮೊರೆಹೋಗಿತ್ತು.
ಮಾಹಿತಿ ತಂತ್ರಜ್ಞಾನ ಕಂಪನಿಗಳಾದ ಅಮೆಜಾನ್, ಆಪಲ್, ಗೂಗಲ್ ಮತ್ತು ಮೈಕ್ರೊಸಾಫ್ಟ್ ಇದನ್ನು ಹಿಂದೆಯೂ ವಿರೋಧಿಸಿದ್ದವು. ಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಯೋಜಿಸಿರುವುದಾಗಿ ‘ಸೇವ್ ಜಾಬ್ಸ್ ಯುಎಸ್ಎ’ ಸಂಘಟನೆ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.