ADVERTISEMENT

ಭಾರತ ಸೇರಿ ಏಳು ದೇಶಗಳ ನಾಗರಿಕರಿಗೆ ಉಚಿತ ಪ್ರವಾಸಿ ವೀಸಾ: ಶ್ರೀಲಂಕಾ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2023, 11:07 IST
Last Updated 24 ಅಕ್ಟೋಬರ್ 2023, 11:07 IST
.
.   

ಕೊಲಂಬೊ (ರಾಯಿಟರ್ಸ್): ಏಳು ದೇಶಗಳ ನಾಗರಿಕರಿಗೆ ಉಚಿತ ಪ್ರವಾಸಿ ವೀಸಾ ನೀಡಲು ಶ್ರೀಲಂಕಾದ ಸಂಪುಟ ಅನುಮೋದನೆ ನೀಡಿದೆ.

ಆರ್ಥಿಕ ಬಿಕ್ಕಟ್ಟಿನಿಂದ ಹೊರಬರುವ ನಿಟ್ಟಿನಲ್ಲಿ ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಶ್ರೀಲಂಕಾ ಈ ಕ್ರಮಕೈಗೊಂಡಿದೆ.

ಭಾರತ, ಚೀನಾ, ರಷ್ಯಾ, ಜಪಾನ್‌, ಥಾಯ್ಲೆಂಡ್‌, ಇಂಡೋನೇಷ್ಯಾ ಮತ್ತು ಮಲೇಷ್ಯಾದ ನಾಗರಿಕರಿಗೆ ಪ್ರಾಯೋಗಿಕವಾಗಿ 2024 ಮಾರ್ಚ್‌ 31ರ ವರೆಗೆ ಉಚಿತ ಪ್ರವಾಸಿ ವೀಸಾ ನೀಡಲು ಅನುಮೋದನೆ ನೀಡಲಾಗಿದೆ.

ADVERTISEMENT

2026ರ ವೇಳೆಗೆ 50 ಲಕ್ಷ ಪ್ರವಾಸಿಗರನ್ನು ಸೆಳೆಯುವ ಉದ್ದೇಶವನ್ನು ಈ ಯೋಜನೆ ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.

ಕೋವಿಡ್‌ ಸಾಂಕ್ರಾಮಿಕದ ಬಳಿಕ ಶ್ರೀಲಂಕಾದ ಪ್ರವಾಸೋದ್ಯಮ ನೆಲಕ್ಕಚ್ಚಿತ್ತು. ಇದರಿಂದ ದೇಶದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿತ್ತು. ಅಗತ್ಯ ವಸ್ತುಗಳ ಕೊರತೆಯ ಪರಿಣಾಮವಾಗಿ ಕಳೆದ ವರ್ಷ ಜನರು ಬೀದಿಗಿಳಿದು ಭಾರಿ ಪ್ರತಿಭಟನೆ ನಡೆಸಿದ್ದರು.

ಈ ವರ್ಷ ಪ್ರವಾಸೋದ್ಯಮ ಮತ್ತೆ ಚೇತರಿಕೆ ಕಾಣುತ್ತಿದ್ದು, ಸೆಪ್ಟೆಂಬರ್‌ವರೆಗೆ 10 ಲಕ್ಷಕ್ಕೂ ಹೆಚ್ಚು ಮಂದಿ ಪ್ರವಾಸಿಗರು ಶ್ರೀಲಂಕಾಕ್ಕೆ ಭೇಟಿ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ. ಶ್ರೀಲಂಕಾಕ್ಕೆ ಭಾರತದದಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.