ADVERTISEMENT

ಶ್ರೀಲಂಕಾ: ಇಬ್ಬರು ಹಿರಿಯ ಅಧಿಕಾರಿಗಳ ಬಂಧನ

ಆತ್ಮಹತ್ಯಾ ಬಾಂಬ್‌ ದಾಳಿ ತಡೆಯುವಲ್ಲಿ ವಿಫಲರಾದ ಆರೋಪ

ಪಿಟಿಐ
Published 2 ಜುಲೈ 2019, 16:23 IST
Last Updated 2 ಜುಲೈ 2019, 16:23 IST

ಕೊಲಂಬೊ: ಶ್ರೀಲಂಕಾದ ರಕ್ಷಣಾ ಖಾತೆ ಮಾಜಿ ಕಾರ್ಯದರ್ಶಿ ಹೇಮಸಿರಿ ಫರ್ನಾಂಡೊ ಮತ್ತು ಅಮಾನತುಗೊಂಡಿರುವ ಪೊಲೀಸ್‌ ಮುಖ್ಯಸ್ಥ ಪುಜಿತ್‌ ಜಯಸುಂದರ ಅವರನ್ನು ಮಂಗಳವಾರ ಬಂಧಿಸಲಾಗಿದೆ.

‘ಈಸ್ಟರ್‌ ಹಬ್ಬದ ದಿನದಂದು ನಡೆದ ಬಾಂಬ್‌ ದಾಳಿಯನ್ನು ತಡೆಯುವಲ್ಲಿ ಈ ಇಬ್ಬರೂ ಅಧಿಕಾರಿಗಳು ವಿಫಲರಾಗಿದ್ದಾರೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಅಟಾರ್ನಿ ಜನರಲ್‌ ಅವರು ಸೂಚಿಸಿದ ಮರುದಿನವೇ ಬಂಧಿಸಲಾಗಿದೆ.

ಇಸ್ಲಾಮಿಕ್‌ ಉಗ್ರರು ದಾಳಿ ನಡೆಸುವ ಬಗ್ಗೆ ಭಾರತದ ಗುಪ್ತಚರ ವಿಭಾಗ ಮಾಹಿತಿ ನೀಡಿದ್ದರೂ ಸೂಕ್ತ ಕ್ರಮ ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ಜಯಸುಂದರ ಮತ್ತು ಫರ್ನಾಂಡೊ ಅವರನ್ನು ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಅಮಾನತುಗೊಳಿಸಿದ್ದರು.

ADVERTISEMENT

ಚಿಕಿತ್ಸೆಗಾಗಿ ದಾಖಲಾಗಿದ್ದ ಫರ್ನಾಂಡೊ ಅವರನ್ನು ನ್ಯಾಷನಲ್‌ ಆಸ್ಪತ್ರೆಯಲ್ಲಿ ಮತ್ತು ಜಯಸುಂದರ ಅವರನ್ನು ಪೊಲೀಸ್‌ ಆಸ್ಪತ್ರೆಯಲ್ಲಿ ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಪೊಲೀಸ್‌ ವಕ್ತಾರ, ಎಸ್‌ಪಿ ರುವಾನ್‌ ಗುಣಶೇಖರ ತಿಳಿಸಿದ್ದಾರೆ.

ಸಿಐಡಿ ಎದುರು ಹಾಜರಾಗಿ ಹೇಳಿಕೆ ದಾಖಲಿಸುವಂತೆ ಜಯಸುಂದರ ಅವರಿಗೆ ಸೂಚಿಸಲಾಗಿತ್ತು. ಆದರೆ, ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಸಿಐಡಿ ಅಧಿಕಾರಿಗಳು ಆಸ್ಪತ್ರೆಗೆ ತೆರಳಿ, ವಿಚಾರಣೆಗೊಳಪಡಿಸಿದ ನಂತರ ಬಂಧಿಸಿದ್ದಾರೆ ಎಂದು ಕೊಲಂಬೊ ಗೆಜೆಟ್‌ ವರದಿ ಮಾಡಿದೆ. ಬಂಧಿತ ಅಧಿಕಾರಿಗಳ ವಿರುದ್ಧ ತನಿಖೆಗೆ ಮೂವರ ಸದಸ್ಯರ ಸಮಿತಿಯನ್ನು ಅಧ್ಯಕ್ಷ ಸಿರಿಸೇನಾ ರಚಿಸಿದ್ದಾರೆ.

ಏಪ್ರಿಲ್‌ 21ರ ಈಸ್ಟರ್‌ ಹಬ್ಬದಂದು ಶ್ರೀಲಂಕಾದಲ್ಲಿ ಚರ್ಚ್‌ ಮತ್ತು ಹೋಟೆಲ್‌ಗಳಲ್ಲಿ ಆತ್ಮಾಹುತಿ ಬಾಂಬ್‌ ದಾಳಿ ನಡೆದಿತ್ತು. 250 ಮಂದಿ ಮೃತಪಟ್ಟಿದ್ದರು.500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

‘ಘೋರ ಅಪರಾಧ’

‘ಇಬ್ಬರೂ ಅಧಿಕಾರಿಗಳು ಬಾಂಬ್‌ ದಾಳಿಯನ್ನು ತಡೆಯುವಲ್ಲಿ ವಿಫಲರಾಗುವ ಮೂಲಕ ಮಾನವೀಯತೆಯ ವಿರುದ್ಧ ಘೋರ ಅಪರಾಧವೆಸಗಿದ್ದಾರೆ. ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಹಂಗಾಮಿ ಪೊಲೀಸ್‌ ಮುಖ್ಯಸ್ಥ ಚಂದನಾ ವಿಕ್ರಮರತ್ನೆ ಅವರಿಗೆ ಅಟಾರ್ನಿ ಜನರಲ್ ದಪ್ಪುಲಾ ಡಿ ಲಿವೆರಾ ಅವರು ಸೋಮವಾರ ಪತ್ರ ಬರೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.