ADVERTISEMENT

ಶ್ರೀಲಂಕಾ: ಪ್ರವಾಹದಿಂದ 1.34 ಲಕ್ಷ ಜನ ಬಾಧಿತ

ಏಜೆನ್ಸೀಸ್
Published 14 ಅಕ್ಟೋಬರ್ 2024, 12:32 IST
Last Updated 14 ಅಕ್ಟೋಬರ್ 2024, 12:32 IST
ಶ್ರೀಲಂಕಾದ ಕೊಲಂಬೊ ನಗರದಲ್ಲಿ ಪ್ರವಾಹದಲ್ಲಿ ಮನೆಯೊಂದು ಜಲಾವೃತಗೊಂಡಿರುವುದು – ಎಪಿ/ಪಿಟಿಐ ಚಿತ್ರ 
ಶ್ರೀಲಂಕಾದ ಕೊಲಂಬೊ ನಗರದಲ್ಲಿ ಪ್ರವಾಹದಲ್ಲಿ ಮನೆಯೊಂದು ಜಲಾವೃತಗೊಂಡಿರುವುದು – ಎಪಿ/ಪಿಟಿಐ ಚಿತ್ರ    

ಕೊಲಂಬೊ: ಭಾರಿ ಮಳೆಯಿಂದಾಗಿ ಶ್ರೀಲಂಕಾದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಮೂವರು ಮೃತಪಟ್ಟಿದ್ದಾರೆ. 

12 ಜಿಲ್ಲೆಗಳಲ್ಲಿ ಪ್ರವಾಹ ತೀವ್ರವಾಗಿದ್ದು ರಾಜಧಾನಿ ಕೊಲಂಬೊ ಹಾಗೂ ಇತರ ಪ್ರದೇಶಗಳಲ್ಲಿ ಸೋಮವಾರ ಶಾಲೆಗಳಿಗೆ ರಜೆ ನೀಡಲಾಗಿತ್ತು.

ವಾರಾಂತ್ಯದಲ್ಲಿ ಸುರಿದ ಭಾರಿ ಮಳೆಯಿಂದಾಗಿ ದೇಶದ ಹಲವೆಡೆ ಮನೆಗಳು, ಕೃಷಿಭೂಮಿ ಹಾಗೂ ರಸ್ತೆಗಳು ಜಲಾವೃತಗೊಂಡಿವೆ. ಒಟ್ಟು 1,34,000 ಜನರು ಪ್ರವಾಹದಿಂದ ಬಾಧಿತರಾಗಿದ್ದಾರೆ. ಮೂವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಎಂದು ವಿಪತ್ತು ನಿರ್ವಹಣಾ ವಿಭಾಗವು ಮಾಹಿತಿ ನೀಡಿದೆ. 

ADVERTISEMENT

ಪ್ರವಾಹದಿಂದ ಒಟ್ಟು 240 ಮನೆಗಳಿಗೆ ಹಾನಿಯಾಗಿದೆ. ಈವರೆಗೆ ಒಟ್ಟು 7,000 ಜನರನ್ನು ಸ್ಥಳಾಂತರಿಸಲಾಗಿದ್ದು 80ಕ್ಕೂ ಹೆಚ್ಚು ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಹಲವೆಡೆ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. 

ಸಂತ್ರಸ್ತರ ರಕ್ಷಣೆಗೆ ಹಾಗೂ ಆಹಾರ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆಗೆ ಸೇನೆ ಹಾಗೂ ನೌಕಾಪಡೆಯ ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ. 

ಪ್ರವಾಹ ಸಂತ್ರಸ್ತರಿಗಾಗಿ ಹೆಚ್ಚುವರಿಯಾಗಿ ₹5 ಕೋಟಿಯನ್ನು ಬಿಡುಗಡೆ ಮಾಡಿದ್ದು, ಅಗತ್ಯವುಳ್ಳವರಿಗೆ ಇದನ್ನು ತಲುಪಿಸುವ ವ್ಯವಸ್ಥೆ ಮಾಡುವಂತೆ ಅಧ್ಯಕ್ಷ ಅನುರಾ ಕುಮಾರ ದಿಸ್ಸನಾಯಕೆ ಅವರು ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ. 

ಕೊಲಂಬೊ ಹಾಗೂ ಅದರ ಹೊರವಲಯದ ಪ್ರದೇಶಗಳಲ್ಲಿ ಪ್ರವಾಹದ ನೀರು, ಮನೆ ಹಾಗೂ ಅಂಗಡಿಗಳ ಚಾವಣಿವರೆಗೂ ತಲುಪಿರುವ ದೃಶ್ಯವನ್ನು ಸ್ಥಳೀಯ ಮಾಧ್ಯಮ‌ಗಳು ಬಿತ್ತರಿಸಿವೆ. 

ಅಕ್ಟೋಬರ್‌ 8ರಿಂದ ಶ್ರೀಲಂಕಾದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಹಲವು ಜಿಲ್ಲೆಗಳಲ್ಲಿ ಕಳೆದ ಎರಡು ದಿನಗಳಲ್ಲಿ 100 ಮಿ.ಮೀ ಮಳೆ ಸುರಿದಿದೆ. ಮಳೆಯಿಂದಾಗಿ ಮೇ ತಿಂಗಳಿನಿಂದಲೂ ದೇಶವು ಪ್ರವಾಹ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಜೂನ್‌ನಲ್ಲಿ ಪ್ರವಾಹದಿಂದ ಉಂಟಾದ ಮಣ್ಣು ಕುಸಿತದಲ್ಲಿ 16 ಜನ ಸಾವಿಗೀಡಾಗಿದ್ದರು. 

ರಾಜಧಾನಿ ಕೊಲಂಬೊ ಸೇರಿ ಹಲವೆಡೆ ಶಾಲೆಗಳಿಗೆ ರಜೆ 240 ಮನೆಗಳಿಗೆ ಹಾನಿ, ಮೂವರು ನಾಪತ್ತೆ 7,000 ಜನರ ಸ್ಥಳಾಂತರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.