ADVERTISEMENT

'ಲಂಕಾ ದಹನ': ಆಡಳಿತ ಪಕ್ಷದ ಮುಖಂಡರ ಮನೆಗಳಿಗೆ ಬೆಂಕಿ, ಪ್ರತಿಭಟನೆ ತೀವ್ರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಮೇ 2022, 14:55 IST
Last Updated 9 ಮೇ 2022, 14:55 IST
   

ಕೊಲಂಬೊ: ದೇಶದಾದ್ಯಂತ ಕರ್ಫ್ಯೂ, ಸೇನಾ ಪಡೆಗಳ ನಿಯೋಜನೆಯ ನಡುವೆ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ. ಆಕ್ರೋಶಗೊಂಡಿರುವ ನಾಗರಿಕರು ರಾಜಕಾರಣಿಗಳ ಮನೆಗಳು, ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಪ್ರತಿಭಟನಕಾರರ ಮೇಲೆ ದಾಳಿ ನಡೆಸಿ ಕಾಲ್ಕಿತ್ತಿರುವ ಆಡಳಿತ ಪಕ್ಷದ ಬೆಂಬಲಿಗರನ್ನು ತಡೆದು ಹಲ್ಲೆ ನಡೆಸಿರುವುದಾಗಿ ವರದಿಯಾಗಿದೆ.

ಶಾಂತಿಯುತ ಪ್ರತಿಭಟನೆಯ ಮೇಲೆ ರಾಜಪಕ್ಸ ಪಕ್ಷದ ಬೆಂಬಲಿಗರು ದಾಳಿ ನಡೆಸಿ, ಸಿಕ್ಕ ಸಿಕ್ಕವರನ್ನು ಎಳೆದಾಡಿ, ಕೋಲುಗಳಲ್ಲಿ ಬಡಿದು ಗಾಯಗೊಳಿಸಿದರು. ಸಂಸದರೊಬ್ಬರು ಪ್ರತಿಭಟನಕಾರರ ಮೇಲೆ ಗುಂಡು ಹಾರಿಸಿದರು. ಪೊಲೀಸರು ಕೆಲವು ಕಡೆ ಅಶ್ರುವಾಯು, ಜಲಫಿರಂಗಿ, ಲಾಠಿ ಪ್ರಯೋಗಿಸಿದರೆ, ಇನ್ನೂ ಕೆಲವು ಕಡೆ ಮೌನಕ್ಕೆ ಶರಣಾಗಿದ್ದರು. ಈ ಬೆಳವಣಿಗೆಗಳಿಂದ ರೊಚ್ಚಿಗೆದ್ದಿರುವ ಸಾರ್ವಜನಿಕರು, ವಿರೋಧ ಪಕ್ಷಗಳ ಸದಸ್ಯರು ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಅದರ ಕಾವು ಈಗ ಆಡಳಿತಾರೂಢ ಪಕ್ಷದ ಮುಖಂಡರನ್ನು ಕಾಳ್ಗಿಚ್ಚಿನಂತೆ ತಟ್ಟುತ್ತಿದೆ.

ಪ್ರಧಾನಿ ಸ್ಥಾನಕ್ಕೆ ಮಹಿಂದಾ ರಾಜಪಕ್ಸ ರಾಜೀನಾಮೆ ನೀಡಿದರೂ ಪ್ರತಿಭಟನೆಯು ಉಗ್ರ ರೂಪಕ್ಕೆ ತಿರುಗಿದೆ. ಶ್ರೀಲಂಕಾದ ನ್ಯೂಸ್‌ವೈರ್‌ ಸುದ್ದಿ ಸಂಸ್ಥೆಯ ಪ್ರಕಾರ, ಆಡಳಿತ ಪಕ್ಷದ ಸಂಸದ ಸನತ್‌ ನಿಶಾಂತಾ ಅವರ ನಿವಾಸಕ್ಕೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ.

ADVERTISEMENT

ಅವರ ಮನೆಗೆ ಬೆಂಕಿ ಹೊತ್ತಿ ಉರಿಯುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ.

ಶ್ರೀಲಂಕಾ ಪೊದುಜನ ಪೆರುಮೌನ (ಎಸ್‌ಎಲ್‌ಪಿಪಿ) ಮೈತ್ರಿಕೂಟದ ರಾಜಕಾರಣಿಗಳ ಮನೆಗಳು ಹಾಗೂ ವಾಹನಗಳಿಗೆ ಪ್ರತಿಭಟನಕಾರರು ಬೆಂಕಿ ಹಚ್ಚಿರುವುದು ಮತ್ತೊಂದು ವಿಡಿಯೊದಲ್ಲಿದೆ.

ಈ ಘಟನೆಗಳಿಗೂ ಮುನ್ನ ಕಾರಿನಲ್ಲಿ ಹೊರಟಿದ್ದ ಸಂಸದ ಅಮರಕೀರ್ತಿ ಅತುಕೊರಲಾ ಅವರನ್ನು ಪ್ರತಿಭಟನಕಾರರು ತಡೆದಿದ್ದರು. ಈ ವೇಳೆ ಕಾರಿಗೆ ಅಡ್ಡಗಟ್ಟಿದ್ದ ಇಬ್ಬರ ಮೇಲೆ ಅವರು ಗುಂಡು ಹಾರಿಸಿದ್ದರು. ಬಳಿಕ ಸಮೀಪದ ಕಟ್ಟಡವೊಂದಕ್ಕೆ ತೆರಳಿ ಅವಿತುಕೊಂಡಿದ್ದರು. ಆದರೆ, ಸಾವಿರಾರು ಪ್ರತಿಭಟನಕಾರರು ಕಟ್ಟಡವನ್ನು ಸುತ್ತುವರಿದಿದ್ದರು. ಅದೇ ಸಮಯದಲ್ಲಿ ಅಮರಕೀರ್ತಿ ಗುಂಡು ಹಾರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಅವರ ಭದ್ರತಾ ಸಿಬ್ಬಂದಿ ಸಹ ಮೃತಪಟ್ಟಿದ್ದಾರೆ.

ಆಕ್ರೋಶಗೊಂಡಿದ್ದ ಗುಂಪು ಅವರ ಕಾರನ್ನು(ಎಸ್‌ಯುವಿ) ಮಗುಚಿ ಹಾಕಿದೆ.

ಸೋಮವಾರ ನಡೆದಿರುವ ಹಿಂಸಾಚಾರ ಘಟನೆಗಳಲ್ಲಿ ಕನಿಷ್ಠ ಮೂರು ಜನ ಸಾವಿಗೀಡಾಗಿದ್ದು, 150ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.