ಕೊಲಂಬೊ: ತನ್ನ ದೇಶದಲ್ಲಿರುವ ಅಳಿವಿನಂಚಿನ ಪ್ರಭೇದದ ಒಂದು ಲಕ್ಷ ಕೋತಿಗಳನ್ನು ಶ್ರೀಲಂಕಾ ದೇಶವು ಚೀನಾಕ್ಕೆ ಕಳುಹಿಸಿಕೊಡಲಿದೆ. ಈ ಸಂಬಂಧ ಚೀನಾದಿಂದ ಬಂದ ಬೇಡಿಕೆಯನ್ನು ಸ್ಥಳೀಯ ಪರಿಸರವಾದಿಗಳ ತೀವ್ರ ವಿರೋಧದ ನಡುವೆಯೂ ಶ್ರೀಲಂಕಾ ಸರ್ಕಾರ ಒಪ್ಪಿಕೊಂಡಿದೆ.
ಶ್ರೀಲಂಕಾದ ಕೃಷಿ ಸಚಿವಾಲಯದ ಹಿರಿಯ ಅಧಿಕಾರಿ ಗುಣದಾಸ ಸಮರಸಿಂಘೆ ಅವರು, ಈ ವಿಷಯ ತಿಳಿಸಿದ್ದು, ಚೀನಾದಲ್ಲಿ ಮೃಗಾಲಯದ ಜೊತೆಗೆ ಸಹಭಾಗಿತ್ವವುಳ್ಳ, ಪ್ರಾಣಿ ಸಂತತಿ ವೃದ್ಧಿಗೆ ಒತ್ತು ನೀಡುವ ಖಾಸಗಿ ಕಂಪನಿಯೊಂದು 1 ಲಕ್ಷ ಕೋತಿಗಳನ್ನು ಹಿಡಿದು ಒದಗಿಸಲು ಬೇಡಿಕೆ ಮಂಡಿಸಿದೆ ಎಂದು ತಿಳಿಸಿದರು.
‘ನಾವು ಒಂದೇ ಬಾರಿಗೆ ಲಕ್ಷ ಕೋತಿಗಳನ್ನು ಹಿಡಿದು ಕಳುಹಿಸುತ್ತಿಲ್ಲ ದೇಶದ ವಿವಿಧೆಡೆ ಕೋತಿಗಳ ಹಾವಳಿಯಿಂದ ಬೆಳೆ ಹಾನಿ ಸಂಭವಿಸುತ್ತಿದೆ ಎಂಬ ಹಿನ್ನೆಲೆಯಲ್ಲಿ ಈ ಬೇಡಿಕೆಯನ್ನು ಒಪ್ಪಿದ್ದೇವೆ. ಆದರೆ, ಸಂರಕ್ಷಿತ ಪ್ರದೇಶದಿಂದ ಕೋತಿಗಳನ್ನು ಹಿಡಿಯುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ಟೋಕ್ ಮಕಾಕ್’ ಎಂದು ಗುರುತಿಸುವ ಅಳಿವಿನಂಚಿನಲ್ಲಿರುವ ಪ್ರಭೇದದ ಕೋತಿಗಳನ್ನು ಶ್ರೀಲಂಕಾದಲ್ಲಿ ಉಪದ್ರವಕಾರಿ ಎಂದು ಗುರುತಿಸಲಾಗಿದೆ. ಜೀವಂತ ಪ್ರಾಣಿಗಳನ್ನು ಹಿಡಿದು ಹೊರದೇಶಕ್ಕೆ ಕಳುಹಿಸುವುದನ್ನು ಶ್ರೀಲಂಕಾದಲ್ಲಿ ನಿಷೇಧಿಸಲಾಗಿದೆ. ಆದರೆ, ಮೂರು ಪ್ರಭೇದಗಳ ಕೋತಿಗಳು, ನವಿಲುಗಳು, ಕಾಡುಹಂದಿಗಳು ಸೇರಿದಂತೆ ಹಲವು ವನ್ಯಜೀವಿಗಳನ್ನು ‘ಸಂರಕ್ಷಿತ ಪಟ್ಟಿ’ಯಿಂದ ಶ್ರೀಲಂಕಾ ಇತ್ತೀಚೆಗಷ್ಟೆ ಕೈಬಿಟ್ಟಿದೆ. ಹೀಗಾಗಿ ಪಟ್ಟಿಯಿಂದ ಕೈಬಿಡಲಾದ ಪ್ರಾಣಿಗಳು ಕೃಷಿಭೂಮಿಯಲ್ಲಿ ಉಪದ್ರವ ಕೊಟ್ಟರೆ ರೈತರು ಅವುಗಳನ್ನು ಕೊಲ್ಲಬಹುದಾಗಿದೆ.
ಒಂದು ಲಕ್ಷ ಕೋತಿಗಳನ್ನು ಚೀನಾದ ಸಾವಿರಕ್ಕೂ ಅಧಿಕ ಮೃಗಾಲಯಗಳಲ್ಲಿ ಇರಿಸಲು ಉದ್ದೇಶಿಸಲಾಗಿದೆ ಎಂದು ಶ್ರೀಲಂಕಾದ ಕೃಷಿ ಸಚಿವರು ಕಳೆದ ವಾರ ತಿಳಿಸಿದ್ದರು. ಆದರೆ, ಶ್ರೀಲಂಕಾವು ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ‘ಕೋತಿಗಳ ವ್ಯಾಪಾರ ಪ್ರಸ್ತಾವ’ ಕಾರ್ಯಗತಗೊಳ್ಳುತ್ತಿರುವುದು ಗಮನಾರ್ಹವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.