ಕೊಲಂಬೊ: ದ್ವೀಪರಾಷ್ಟ್ರ ಶ್ರೀಲಂಕಾದ ಸಂಸತ್ತಿಗೆ ನಡೆದ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು ಅಧ್ಯಕ್ಷ ಅನುರಾ ಕುಮಾರ ದಿಸ್ಸನಾಯಕೆ ನೇತೃತ್ವದ ನ್ಯಾಷನಲ್ ಪೀಪಲ್ಸ್ ಪವರ್ (ಎನ್‌ಪಿಪಿ) ಪಕ್ಷ ಭಾರಿ ಬಹುಮತದತ್ತ ದಾಪುಗಾಲಿಟ್ಟಿದೆ.
225 ಸದಸ್ಯ ಬಲದ ಸಂಸತ್ತಿಗೆ ನಿನ್ನೆ (ನ.14) ಸಂಜೆ 4 ಗಂಟೆಯವರೆಗೆ ಮತದಾನ ನಡೆದಿತ್ತು. ಮತದಾನ ಮುಗಿದ ಕೂಡಲೇ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿತ್ತು. ಈ ಚುನಾವಣೆಯಲ್ಲಿ ಸುಮಾರು 17 ಲಕ್ಷ ಮತದಾರರು ಹಕ್ಕು ಚಲಾಯಿಸಿದ್ದರು ಎಂದು ಚುನಾವಣೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶುಕ್ರವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಎನ್‌ಪಿಪಿ ಪಕ್ಷ ಶೇ.62ರಷ್ಟು ಮತಗಳನ್ನು ಪಡೆಯುವ ಮೂಲಕ ಸ್ಪಷ್ಟ ಬಹುಮತದತ್ತ ಸಾಗಿದೆ. ಈಗಾಗಲೇ ಎನ್‌ಪಿಪಿ 35 ಸ್ಥಾನಗಳನ್ನು ಗೆದ್ದುಕೊಂಡಿದ್ದು, 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಮುಖ ವಿರೋಧ ಪಕ್ಷಗಳಾದ ಸಜಿತ್ ಪ್ರೇಮದಾಸ ನೇತೃತ್ವದ ಎಸ್‌ಜೆಬಿ ಶೇ 18ರಷ್ಟು ಮತಗಳನ್ನು ಪಡೆದುಕೊಂಡರೆ, ರಾನಿಲ್ ವಿಕ್ರಮಸಿಂಘೆ ನಾಯಕತ್ವದ ಎನ್‌ಡಿಎಫ್ ಶೇ 5ರಷ್ಟು ಮತಗಳನ್ನು ಮಾತ್ರ ಪಡೆದುಕೊಂಡಿವೆ. ಎಸ್‌ಜೆಬಿ 8 ಸ್ಥಾನಗಳನ್ನು ಗೆದ್ದರೆ, ಎನ್‌ಡಿಎಫ್ ಕೇವಲ ಒಂದು ಸ್ಥಾನ ಮಾತ್ರ ಗೆದ್ದುಕೊಂಡಿದೆ ಎಂದು ಚುನಾವಣೆ ಅಧಿಕಾರಿಗಳು ಹೇಳಿದ್ದಾರೆ.
ರಾಜಪಕ್ಷೆ ಕುಟುಂಬದ ಮಹಿಂದಾ ನೇತೃತ್ವದ ಶ್ರೀಲಂಕಾ ಪೀಪಲ್ಸ್ ಫ್ರಂಟ್ (ಎಸ್‌ಎಲ್‌ಪಿಪಿ) ಮತಗಳಿಕೆ ಪ್ರಮಾಣದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರೂ 2 ಸ್ಥಾನಗಳನ್ನು ಗೆದ್ದುಕೊಂಡಿದೆ.
225 ಸ್ಥಾನಗಳ ಪೈಕಿ ಎನ್‌ಪಿಪಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಕೊಳ್ಳಲಿದೆ ಎಂದು ರಾಜಕೀಯ ವಿಶ್ಲೇಷಕರು ತಿಳಿಸಿದ್ದಾರೆ. ಶ್ರೀಲಂಕಾದಲ್ಲಿ 2022ರಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ.
ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದೆ....
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.