ಕೊಲೊಂಬೊ: ಶ್ರೀಲಂಕಾದಲ್ಲಿ ಇಂಧನ, ಆಹಾರ ಹಾಗೂ ಅತ್ಯಗತ್ಯ ಔಷಧಗಳಿಗೆ ಕೊರತೆ ಎದುರಾಗಿದ್ದು, ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ (ಐಎಂಎಫ್) ಸರ್ಕಾರವು ಹಣಕಾಸು ನೆರವು ಕೋರಲು ಮುಂದಾಗಿದೆ. ಅದರ ಬೆನ್ನಲ್ಲೇ ಸೋಮವಾರ ರಿಟೇಲ್ ತೈಲ ಮಾರಾಟಗಾರರು ಇಂಧನ ದರದಲ್ಲಿ ಏರಿಕೆ ಮಾಡಿದ್ದಾರೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನ (ಐಒಸಿ) ಸ್ಥಳೀಯ ಘಟಕವಾಗಿರುವ ಲಂಕಾ ಐಒಸಿ, ಪ್ರತಿ ಲೀಟರ್ ಡೀಸೆಲ್ ದರವನ್ನು 75 ರೂಪಾಯಿ ಮತ್ತು ಪೆಟ್ರೋಲ್ ದರವನ್ನು 35 ರೂಪಾಯಿ ಹೆಚ್ಚಿಸಿದೆ. ಇದರಿಂದಾಗಿ ಪ್ರತಿ ಲೀಟರ್ ಪೆಟ್ರೋಲ್ ದರ ₹367 ಮತ್ತು ಡೀಸೆಲ್ ದರ ₹327 ಮುಟ್ಟಿದೆ.
ಈ ವರ್ಷ ಪೆಟ್ರೋಲ್ ದರ ಶೇಕಡ 90ರಷ್ಟು ಹಾಗೂ ಡೀಸೆಲ್ ದರ ಶೇಕಡ 138ರಷ್ಟು ಹೆಚ್ಚಳ ಕಂಡಿದೆ. ಶ್ರೀಲಂಕಾದಲ್ಲಿ ಸಾರ್ವಜನಿಕ ಸಾರಿಗೆಗಾಗಿ ಡೀಸೆಲ್ ಅತಿ ಹೆಚ್ಚು ಬಳಕೆಯಲ್ಲಿದೆ.
ತೀವ್ರ ಆರ್ಥಿಕ ಹಿಂಜರಿತಕ್ಕೆ ಒಳಗಾಗಿರುವ ಶ್ರೀಲಂಕಾದಲ್ಲಿ ಇಂದು ಒಂದೇ ದಿನದಲ್ಲಿ ತೈಲ ದರವನ್ನು ಶೇಕಡ 35ರಷ್ಟು ಹೆಚ್ಚಳ ಮಾಡಿದ್ದಾರೆ.
ಆರ್ಥಿಕತೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಶ್ರೀಲಂಕಾದ ಹಣಕಾಸು ಸಚಿವ ಅಲಿ ಸಾಬ್ರಿ ಅವರನ್ನು ಒಳಗೊಂಡ ನಿಯೋಗವು ವಾಷಿಂಗ್ಟನ್‌ನಲ್ಲಿ ಐಎಂಎಫ್‌ನಿಂದ ಹಣಕಾಸು ಸಹಕಾರ ಕೋರಲಿದೆ. ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು 300 ಕೋಟಿ ಡಾಲರ್‌ನಿಂದ 400 ಕೋಟಿ ಡಾಲರ್‌ನಷ್ಟು ಸಹಕಾರ ಕೋರಲಿದೆ.
ಶ್ರೀಲಂಕಾದ ಕೊಲಂಬೊ ಷೇರು ವಿನಿಮಯ ಕೇಂದ್ರದಲ್ಲಿ (ಸಿಎಸ್‌ಇ) ಸೋಮವಾರದಿಂದ ಐದು ದಿನ ವಹಿವಾಟು ಸ್ಥಗಿತಗೊಳಿಸಲಾಗಿದೆ. ಈ ಮೂಲಕ ಸತತ ಎರಡನೇ ವಾರ ಸಿಎಸ್‌ಇ ವಹಿವಾಟು ಸ್ಥಗಿತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.