ಕೊಲಂಬೊ: 290 ಮಂದಿಯನ್ನು ಬಲಿ ತೆಗೆದುಕೊಂಡ ಕೊಲೊಂಬೊ ಸರಣಿ ಬಾಂಬ್ ದಾಳಿಯ ಹಿಂದೆ ಸ್ಥಳೀಯ ಇಸ್ಲಾಮಿಕ್ ಸಂಘಟನೆಯಾದ ನ್ಯಾಷನಲ್ ತೌಹೀತ್ ಜಮಾ ಅತ್ (ಎನ್‍ಟಿಜೆ) ಕೈವಾಡ ಇದೆ ಎಂದು ಶ್ರೀಲಂಕಾ ಸರ್ಕಾರದ ವಕ್ತಾರ ರಜಿತ ಸೇನಾರತ್ನೆ ಆರೋಪಿಸಿದ್ದಾರೆ.
ಕೇಂದ್ರ ಸಚಿವರೂ ಆಗಿರುವ ಸೇನಾರತ್ನೆ, ಈ ಸಂಘಟನೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ಲಭಿಸಿದೆಯೇ ಎಂಬುದರ ಬಗ್ಗೆಯೂ ಸರ್ಕಾರ ತನಿಖೆ ಮಾಡುತ್ತಿದೆ ಎಂದಿದ್ದಾರೆ.
ಶ್ರೀಲಂಕಾದ ಪ್ರಮುಖ ಚರ್ಚ್‌ಗಳ ಮೇಲೆ ಆತ್ಮಾಹುತಿ ದಾಳಿಗೆ ಸಂಚು ಹೂಡಿರುವ ಸಾಧ್ಯತೆ ಇದೆ ಎಂದು ಗುಪ್ತಚರ ಮಾಹಿತಿ ಆಧರಿಸಿ ಪೊಲೀಸ್ ಮುಖ್ಯಸ್ಥ ಪುಜುತ್ ಜಯಸುಂದರ ಅವರು ಏಪ್ರಿಲ್ 11ರಂದು ಅಧಿಕಾರಿಗಳಿಗೆ ಎಚ್ಚರಿಕೆ ಸಂದೇಶ ಕಳುಹಿಸಿದ್ದರು. ಈ ಕುರಿತು ದಾಖಲೆಗಳು ಲಭ್ಯವಾಗಿವೆ ಎಂದು ಎಎಫ್‌ಪಿ ಸುದ್ದಿಸಂಸ್ಥೆ ವರದಿ ಮಾಡಿತ್ತು.
ಪ್ರಮುಖ ಚರ್ಚ್‌ಗಳು ಮತ್ತು ಭಾರತೀಯ ರಾಯಭಾರ ಕಚೇರಿಗಳನ್ನು ಗುರಿಯಾಗಿಸಿ ಆತ್ಮಾಹುತಿ ದಾಳಿ ನಡೆಸಲು ಎನ್‌ಟಿಜೆ (ನ್ಯಾಷನಲ್ ತೌಹೀತ್ ಜಮಾ ಅತ್) ಸಂಘಟನೆ ಸಂಚು ರೂಪಿಸುತ್ತಿದೆ ಎಂಬುದಾಗಿ ವಿದೇಶಿ ಗುಪ್ತಚರ ಸಂಸ್ಥೆಯೊಂದು ಸುಳಿವು ನೀಡಿದೆ’ ಎಂದು ಎಚ್ಚರಿಕೆ ಸಂದೇಶದಲ್ಲಿ ಉಲ್ಲೇಖಿಸಲಾಗಿತ್ತು.
ಎನ್‌ಟಿಜೆಯು ಮೂಲಭೂತವಾದಿ ಮುಸ್ಲಿಂ ಸಂಘಟನೆಯಾಗಿದೆ. ಕಳೆದ ವರ್ಷ ಶ್ರೀಲಂಕಾದ ಹಲವೆಡೆ ಬೌದ್ಧ ಪ್ರತಿಮೆಗಳನ್ನು ನಾಶಪಡಿಸಿದ ಆರೋಪವೂ ಈ ಸಂಘಟನೆ ಮೇಲಿದೆ. ದಾಳಿಗೆ ಸಂಬಂಧಿಸಿ ಈಗಾಗಲೇ 24 ಮಂದಿಯನ್ನು ಬಂಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.