ಕೊಲಂಬೊ: ಆರ್ಥಿಕ ಬಿಕ್ಕಟ್ಟಿನಲ್ಲಿ ನಲುಗಿರುವ ಶ್ರೀಲಂಕಾದಲ್ಲಿ ಜನರು, ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ. ರಾಜಕೀಯ ಪಕ್ಷಗಳ ಸದಸ್ಯರು, ಪ್ರತಿಭಟನಾಕಾರರ ನಡುವೆ ಸೋಮವಾರ ಘರ್ಷಣೆ ನಡೆದಿದ್ದು, ಪೊಲೀಸರು ದೇಶದಾದ್ಯಂತ ಕರ್ಫ್ಯೂ ವಿಧಿಸಿದ್ದಾರೆ.
ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಬೆಲೆ ಏರಿಕೆಯ ಬಿಸಿ ಜೊತೆಗೆ ಆಹಾರ, ಇಂಧನ ಹಾಗೂ ಔಷಧ ಸೇರಿದಂತೆ ಅಗತ್ಯ ವಸ್ತುಗಳ ಕೊರತೆ ಉಂಟಾಗಿದೆ. ಇದರಿಂದ ತತ್ತರಿಸಿರುವ ಜನರು ಸರ್ಕಾರದ ವಿರುದ್ಧ ನಿರಂತರ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.
ಇಂದು ಮಧ್ಯ ಕೊಲಂಬೊದಲ್ಲಿ ನಡೆದಿರುವ ಹಿಂಸಾಚಾರದಲ್ಲಿ ಕನಿಷ್ಠ 20 ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ರಾಜಧಾನಿಯಲ್ಲಿ ಸೇನಾ ಪಡೆಗಳನ್ನು ನಿಯೋಜಿಸಲಾಗಿದೆ.
ಪ್ರಧಾನಿ ಮಹಿಂದಾ ರಾಜಪಕ್ಸ ರಾಜೀನಾಮೆ ನೀಡಬೇಕು ಮತ್ತು ಹೊಸ ಸರ್ಕಾರ ರಚನೆ ಮಾಡುವಂತೆ ಒತ್ತಾಯಿಸಿ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ಕಚೇರಿಯ ಹೊರ ಭಾಗದಲ್ಲಿ ಹಲವು ಮಂದಿ ಪ್ರತಿಭಟನೆ ನಡೆಸಿದ್ದಾರೆ. ಅವರ ಮೇಲೆ ರಾಜಪಕ್ಸ ಅವರ ಬೆಂಬಲಿಗರು ಕೋಲುಗಳಿಂದ ಹಲ್ಲೆ ನಡೆಸಿದ್ದಾರೆ.
ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದವರು ಹಾಕಿಕೊಂಡಿದ್ದ ಟೆಂಟ್‌ಗಳನ್ನು ಆಡಳಿತ ಪಕ್ಷದ ಬೆಂಬಲಿಗರು ಕಿತ್ತೊಗೆದಿದ್ದಾರೆ. ಪೊಲೀಸರು ನಿಗದಿ ಪಡಿಸಿದ್ದ ಗಡಿಯನ್ನು ದಾಟಿದವರ ಮೇಲೆ ಅಶ್ರುವಾಯು ಮತ್ತು ಜಲ ಫಿರಂಗಿ ಪ್ರಯೋಗಿಸಲಾಗಿದೆ.
'ಜನರು ಸಂಯಮ ಕಾಯ್ದುಕೊಳ್ಳಬೇಕು, ಹಿಂಸೆಯಿಂದ ಹಿಂಸೆ ಮಾತ್ರವೇ ಸೃಷ್ಟಿಯಾಗುತ್ತದೆ' ಎಂದು ಅಧ್ಯಕ್ಷ ಗೊಟಬಯ ಅವರ ಸೋದರ, ಪ್ರಧಾನಿ ಮಹಿಂದಾ ರಾಜಪಕ್ಸ ಆಗ್ರಹಿಸಿದ್ದಾರೆ.
'ನಾವು ಈಗ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿಗೆ ಆರ್ಥಿಕತೆಯ ಪರಿಹಾರದ ಅವಶ್ಯಕತೆ ಇದೆ, ಅದನ್ನು ಪರಿಹರಿಸಲು ಸರ್ಕಾರವು ಬದ್ಧವಾಗಿದೆ' ಎಂದು ಟ್ವೀಟಿಸಿದ್ದಾರೆ.
ವರ್ತಕ ಸಂಘಗಳು ದೇಶದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸುವ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಲು ಪ್ರಯತ್ನಿಸಿವೆ. ಆದರೆ, ಸರ್ಕಾರವು ಸೇನೆಗೆ ಜನರನ್ನು ಬಂಧಿಸುವ ಅಧಿಕಾರ ನೀಡುವ ಮೂಲಕ ಶುಕ್ರವಾರ ತುರ್ತು ಪರಿಸ್ಥಿತಿ ಘೋಷಿಸಿದೆ.
ರಾಜಪಕ್ಸ ಕುಟುಂಬವು ರಾಜಕೀಯ ತ್ಯಜಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಶ್ರೀಲಂಕಾದ ಬಹುಪಾಲು ಆದಾಯವು ಪ್ರವಾಸೋದ್ಯಮದಿಂದ ಬರುತ್ತದೆ. ಕೊರೊನಾ ವೈರಸ್ ಸಾಂಕ್ರಾಮಿಕದಿಂದಾಗಿ ಪ್ರವಾಸೋದ್ಯಮಕ್ಕೆ ಅಡ್ಡಿಯಾಗಿ, ವಿದೇಶಿ ಕರೆನ್ಸಿಗಳ ಹರಿವು ಕಡಿಮೆಯಾಯಿತು. ಅದರಿಂದಾಗಿ ಸರ್ಕಾರವು ಸಾಲ ಪಾವತಿಸಲು ಸಾಧ್ಯವಾಗದೆ ತಟಸ್ಥವಾಯಿತು. ವಿದೇಶದಿಂದ ಹಲವು ಸರಕುಗಳ ಆಮದು ನಿಲ್ಲಿಸಬೇಕಾಯಿತು. ಅದರಿಂದಾಗಿ ಅಗತ್ಯ ವಸ್ತುಗಳ ತೀವ್ರ ಕೊರತೆ, ಹಣದುಬ್ಬರ ಹೆಚ್ಚಳ ಹಾಗೂ ವಿದ್ಯುತ್ ಕಡಿತ ಸಮಸ್ಯೆಗಳು ಎದುರಾದವು.
ರಾಷ್ಟ್ರವು ವಿದೇಶದ 51 ಬಿಲಿಯನ್ ಡಾಲರ್(ಸುಮಾರು ₹3.95 ಲಕ್ಷ ಕೋಟಿ) ಸಾಲವನ್ನು ಪಾವತಿಸಲು ಸಾಧ್ಯವಾಗುವುದಿಲ್ಲ ಎಂದು ಸರ್ಕಾರವು ಏಪ್ರಿಲ್‌ನಲ್ಲಿ ಘೋಷಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.