ಮುಂಬೈ/ ನವದೆಹಲಿ: ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಶ್ರೀಲಂಕಾವನ್ನು ಚೀನಾದ ಪ್ರಭಾವದಿಂದ ಹೊರತರಲು, ದ್ವೀಪ ರಾಷ್ಟ್ರಕ್ಕೆ ಇನ್ನೂ 200 ಕೋಟಿ ಡಾಲರ್ (₹15,200 ಕೋಟಿ)ಹಣಕಾಸಿನ ನೆರವು ನೀಡಲು ಭಾರತ ಸಿದ್ಧವಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಚೀನಾವನ್ನು ಹೆಚ್ಚಾಗಿ ಅವಲಂಬಿಸಿದ್ದ ಶ್ರೀಲಂಕಾವನ್ನು ಮರಳಿ ತನ್ನ ಪ್ರಭಾವದ ಪರಿಧಿಗೆ ತಂದುಕೊಳ್ಳಲು ಕೇಂದ್ರ ಸರ್ಕಾರ,ದ್ವೀಪ ರಾಷ್ಟ್ರಕ್ಕೆ ಅಗತ್ಯ ಆಹಾರ ಮತ್ತು ಇಂಧನ ಪೂರೈಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ‘ರಾಯಿಟರ್ಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.
‘ಹದಗೆಟ್ಟ ಆರ್ಥಿಕ ಪರಿಸ್ಥಿತಿಯಿಂದ ಶ್ರೀಲಂಕಾ ಬಾಹ್ಯ ಸಾಲ ಮರುಪಾವತಿ ಮಾಡುವ ಸ್ಥಿತಿಯಲ್ಲಿಲ್ಲ ಎಂದು ಘೋಷಿಸಿಕೊಂಡಿರುವುದು ಕಳವಳಕಾರಿ. ಆದರೂ, ನಾವುಅವರಿಗೆ ಇನ್ನೂ 200 ಕೋಟಿ ಡಾಲರ್‌ವರೆಗೆ ಹಣಕಾಸು ನೆರವು ಮತ್ತು ಬೆಂಬಲ ನೀಡಲು ಸಿದ್ಧರಿದ್ದೇವೆ’ ಎಂದು ನವದೆಹಲಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
‘ಚೀನಾದ ಸಾಲ ತೀರಿಸಲು ಶ್ರೀಲಂಕಾವು ಭಾರತದ ನೆರವು ಕೇಳಿದೆ. ಇದಕ್ಕೆ ಭಾರತವು ಸಕರಾತ್ಮಕವಾಗಿ ಸ್ಪಂದಿಸಿದ್ದು, ಚೀನಾದ ಮೇಲಿನ ಅವಲಂಬನೆ ತಗ್ಗಿಸಲು ಶ್ರೀಲಂಕಾಕ್ಕೆ ಅಗತ್ಯ ನೆರವು ನೀಡಲು ಭಾರತ ಉತ್ಸುಕವಾಗಿದೆ. ಜತೆಗೆ ಪ್ರಬಲ ಪಾಲುದಾರನಾಗಿಸಿಕೊಳ್ಳಲು ಬಯಸುತ್ತಿದೆ’ ಎಂದು ಮತ್ತೊಂದು ಮೂಲ ಹೇಳಿದೆ.
ಶ್ರೀಲಂಕಾಕ್ಕೆ ಚೀನಾವು ಸುಮಾರು 350 ಕೋಟಿ ಡಾಲರ್ ಸಾಲ ನೀಡಿದೆ. ಜತೆಗೆ ದ್ವೀಪ ರಾಷ್ಟ್ರದಲ್ಲಿ ಬಂದರುಗಳು ಮತ್ತು ರಸ್ತೆಗಳನ್ನು ನಿರ್ಮಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.