ಕೊಲಂಬೊ(ಪಿಟಿಐ): ನಿಷೇಧಿತ ಇಸ್ಲಾಮಿಕ್ ಸ್ಟೇಟ್ (ಐ.ಎಸ್) ಭಯೋತ್ಪಾದಕ ಸಂಘಟನೆಯ ಜೊತೆ ನಂಟು ಇರುವ ಆರೋಪದ ಅಡಿಯಲ್ಲಿ ಶ್ರೀಲಂಕಾದ ನಾಲ್ವರನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳವು (ಎಟಿಎಸ್) ಬಂಧಿಸಿರುವ ಬೆನ್ನಲ್ಲೇ, ಆ ವ್ಯಕ್ತಿಗಳ ಬಗ್ಗೆ ಮಾಹಿತಿ ಕಲೆಹಾಕಲು ಶ್ರೀಲಂಕಾ ಮುಂದಾಗಿದೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.
ಖಚಿತ ಸುಳಿವು ಆಧರಿಸಿ ಗುಜರಾತ್‌ನ ಎಟಿಎಸ್ ಅಧಿಕಾರಿಗಳು ನಾಲ್ಕು ಮಂದಿಯನ್ನು ಅಹಮದಾಬಾದ್‌ನ ವಿಮಾನ ನಿಲ್ದಾಣದಲ್ಲಿ ಭಾನುವಾರ ಬಂಧಿಸಿದ್ದಾರೆ. ಈ ನಾಲ್ಕು ಮಂದಿ ಕೊಲಂಬೊದಿಂದ ಚೆನ್ನೈ ಮೂಲಕ ಅಹಮದಾಬಾದ್‌ಗೆ ಬಂದಿದ್ದರು.
ಐ.ಎಸ್ ಸಂಘಟನೆಯ ಪರವಾಗಿ ಭಯೋತ್ಪಾದಕ ಕೃತ್ಯಗಳನ್ನು ಎಸಗಲು ಈ ನಾಲ್ಕು ಮಂದಿ ಭಾರತಕ್ಕೆ ಬಂದಿದ್ದರು, ಇವರು ಐ.ಎಸ್ ಸದಸ್ಯರು, ಪಾಕಿಸ್ತಾನದಲ್ಲಿ ವಾಸಿಸುತ್ತಿರುವ ಶ್ರೀಲಂಕಾ ಮೂಲದ ವ್ಯಕ್ತಿಯೊಬ್ಬ ಇವರಲ್ಲಿ ಉಗ್ರ ಸಂಘಟನೆಯ ಪರ ವಿಚಾರಗಳನ್ನು ತುಂಬಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಶ್ರೀಲಂಕಾದ ಗುಪ್ತಚರ ವಿಭಾಗದ ಅಧಿಕಾರಿಗಳು ಶಂಕಿತರ ಹಿನ್ನೆಲೆಯನ್ನು ಪರಿಶೀಲಿಸಲು, ಅವರು ಐ.ಎಸ್ ಜೊತೆ ನಂಟು ಹೊಂದಿರುವ ಬಗ್ಗೆ ತನಿಖೆ ನಡೆಸಲು ಭಾರತದ ಗುಪ್ತಚರ ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಕೋರಿದ್ದಾರೆ ಎಂದು ಡೈಲಿ ಮಿರರ್ ಪತ್ರಿಕೆ ವರದಿ ಮಾಡಿದೆ.
ಬೆಳವಣಿಗೆಗಳನ್ನು ತಾವು ಸೂಕ್ಷ್ಮವಾಗಿ ಅವಲೋಕಿಸುತ್ತಿರುವುದಾಗಿ ಶ್ರೀಲಂಕಾದ ಸಾರ್ವಜನಿಕ ಭದ್ರತಾ ಸಚಿವ ತಿರನ್ ಅಲ್ಲೆಸ್ ಮತ್ತು ಐಜಿಪಿ ದೇಶಬಂಧು ತೆನ್ನಕೂನ್ ಹೇಳಿದ್ದಾರೆ.
ಶಂಕಿತರಾದ ಮೊಹಮ್ಮದ್ ನುಸ್ರತ್, ಮೊಹಮ್ಮದ್ ಫಾರೂಕ್, ಮೊಹಮ್ಮದ್ ನಫ್ರನ್ ಮತ್ತು ಮೊಹಮ್ಮದ್ ರಸ್ದೀನ್ ಅವರು ಈ ಮೊದಲು ಶ್ರೀಲಂಕಾದ ನಿಷೇಧಿತ ಉಗ್ರಗಾಮಿ ಸಂಘಟನೆ ನ್ಯಾಷನಲ್ ತೌಹೀದ್ ಜಮಾತ್‌ನ ಸದಸ್ಯರಾಗಿದ್ದರು. ನಂತರ ಅವರು ಪಾಕಿಸ್ತಾನದ ಅಬು ಬಕರ್ ಅಲ್ ಬಗ್ದಾದಿ ಸಂಪರ್ಕಕ್ಕೆ ಬಂದು ಐ.ಎಸ್ ಸೇರಿದ್ದಾರೆ ಎಂದು ಗುಜರಾತ್ ಡಿಜಿಪಿ ವಿಕಾಸ್ ಸಹಾಯ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.