ಕೊಲಂಬೊ: ‘ಕೋವಿಡ್ 19‘ ಸಾಂಕ್ರಾಮಿಕದಿಂದಾಗಿ ಕಳೆದ ಹತ್ತು ತಿಂಗಳಿನಿಂದ ಸಂಪೂರ್ಣ ಸ್ಥಗಿತಗೊಂಡಿದ್ದ ಶ್ರೀಲಂಕಾದ ಪ್ರವಾಸೋದ್ಯಮ ಚಟುವಟಿಕೆಗಳನ್ನು ಗುರುವಾರದಿಂದ ಪೂರ್ಣ ಪ್ರಮಾಣದಲ್ಲಿ ಪುನರಾರಂಭಿಸಲಾಗಿದೆ.
ದೇಶದಲ್ಲಿರುವ ಎರಡು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪೂರ್ಣ ಪ್ರಮಾಣದಲ್ಲಿ ಅಂತರರಾಷ್ಟ್ರೀಯ ವಿಮಾನಯಾನ ಸಂಚಾರ ಆರಂಭವಾಗಿದೆ.
ಕೊರೊನಾ ಸೋಂಕು ಹರಡುವುದನ್ನು ತಡೆಯಲು ಹೊಸ ನಿಯಮಾವಳಿಗಳನ್ನು ರೂಪಿಸಲಾಗಿದೆ. ಇದರ ಪ್ರಕಾರ ಪ್ರವಾಸಿಗರು ತಮ್ಮ ದೇಶಗಳಿಂದ ವಿಮಾನಯಾನ ಆರಂಭಿಸುವ 72 ಗಂಟೆಗಳಿಗೆ ಮುನ್ನ ಕೋವಿಡ್ 19 ಪರೀಕ್ಷೆಗೆ ಒಳಪಟ್ಟಿರಬೇಕು.
ವಿದೇಶಿ ಪ್ರವಾಸಿಗರು ಶ್ರೀಲಂಕಾದಲ್ಲಿನ ಹೋಟೆಲ್‌ಗೆ ಬಂದು, ಏಳು ದಿನಗಳ ನಂತರ ಪುನಃ ಕೊರೊನಾ ಸೋಂಕು ಪರೀಕ್ಷೆ ಮಾಡಿಸಿಕೊಳ್ಳಬೇಕು. ಹಾಗಯೇ ಪ್ರವಾಸಿಗರು ಸ್ಥಳೀಯರೊಂದಿಗೆ ಬೆರೆಯದೇ, ತಮಗೆ ಗೊತ್ತುಪಡಿಸಿದ ಹೋಟೆಲ್‌ಗಳಲ್ಲೇ ಉಳಿಯಬೇಕು. ಶ್ರೀಲಂಕಾದಲ್ಲಿ ವಿದೇಶಿ ಪ್ರವಾಸಿಗರ ವಸತಿಗಾಗಿ 180 ಹೋಟೆಲ್‌ಗಳನ್ನು ಮೀಸಲಿಡಲಾಗಿದೆ.
ಶ್ರೀಲಂಕಾದಲ್ಲಿ ಡಿಸೆಂಬರ್ 26ರಿಂದ ಪ್ರಾಯೋಗಿಕವಾಗಿ ಪ್ರವಾಸೋದ್ಯಮ ಚಟುವಟಿಕೆಗಳು ಪುನರಾರಂಭವಾಗಿತ್ತು. ಈ ಅವಧಿಯಲ್ಲಿ ಉಕ್ರೇನ್‌ನ 1500 ಮಂದಿ ಪ್ರವಾಸಿಗರು ಶ್ರೀಲಂಕಾಕ್ಕೆ ಭೇಟಿ ನೀಡಿದ್ದರು.
ಕೊರೊನಾ ಸೋಂಕು ಹರಡಲು ಆರಂಭಿಸಿದ ನಂತರ ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಈ ದ್ವೀಪರಾಷ್ಟ್ರ ದಾದ್ಯಂತ ಪ್ರವಾಸೋದ್ಯಮ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.