ಕೊಲಂಬೊ: 2019ರ ಈಸ್ಟರ್ ದುರಂತದ ಎಲ್ಲಾ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಲಾಗುವುದು ಎಂದು ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಅವರು ಭಾನುವಾರ ಭರವಸೆ ನೀಡಿದರು.
ಈ ದಾಳಿಯಲ್ಲಿ 11 ಭಾರತೀಯರು ಸೇರಿದಂತೆ 270 ಮಂದಿ ಸಾವಿಗೀಡಾಗಿದ್ದರು.
‘ಯಾವುದೇ ಪ್ರಭಾವಕ್ಕೆ ಒಳಗಾಗದೆ ಸ್ವತಂತ್ರವಾಗಿ ಹಾಗೂ ನಿಷ್ಪಕ್ಷಪಾತವಾಗಿ ಕಾನೂನು ಕ್ರಮ ಜರುಗಿಸಲಾಗುವುದು. ಎಲ್ಲಾ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಅವರು ಹೇಳಿದರು.
ಇದೇ ವೇಳೆ, ‘ಈ ರೀತಿಯ ಯಾವುದೇ ಘೋರ ಕೃತ್ಯಗಳು ಪುನಃ ಮರುಕಳಿಸದಂತೆ ದೇಶದ ಭದ್ರತೆ ಕಾಪಾಡಲಾಗುವುದು’ ಎಂದು ರಾನಿಲ್ ಅವರು ಪ್ರತಿಜ್ಞೆ ಮಾಡಿದರು.
‘ಯಾವುದೇ ಜಾತಿ, ಧರ್ಮ, ಪಕ್ಷ ಅಥವಾ ವರ್ಣ ಲೆಕ್ಕಿಸದೆ ಎಲ್ಲಾ ಶ್ರೀಲಂಕನ್ನರ ಆಕಾಂಕ್ಷೆಗಳನ್ನು ಸಾಕಾರಗೊಳಿಸಲು ಸರ್ಕಾರ ಬದ್ಧವಾಗಿದೆ. ಭವಿಷ್ಯದಲ್ಲಿ ನಾವೆಲ್ಲರೂ ಇಂತಹ ಸಮಸ್ಯೆಗಳಿಂದ ಹೊರಬರುತ್ತೇವೆಂಬ ನಂಬಿಕೆ ನನಗಿದೆ’ ಎಂದೂ ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.