ಕೊಲಂಬೊ: ಆರ್ಥಿಕ ಬಿಕ್ಕಟ್ಟಿನಿಂದ ದಿವಾಳಿಯಾದ ಬ್ಯಾಂಕ್‌ಗಳಿಗೆ ಸಾಲದ ಮರುಹಂಚಿಕೆ ಮತ್ತು ವಿಶ್ವ ಹಣಕಾಸು ನಿಧಿಯ(ಐಎಂಎಫ್) ಸಹಾಯ ದೊರಕಲು ಇರುವ ತೊಡಕು ನಿವಾರಿಸಲು ಚೀನಾ ಒಪ್ಪಿದೆ ಎಂದು ಶ್ರೀಲಂಕಾದ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಮಂಗಳವಾರ ಹೇಳಿದ್ದಾರೆ.
ಲಂಕಾ ಸಂಸತ್ತಿನಲ್ಲಿ ಅವರು ಮಾತನಾಡಿದರು. ’ಬೀಜಿಂಗ್ ಈಗ ಸಾಲದ ಮರು ಹಂಚಿಕೆಗೆ ಒಪ್ಪಿಗೆ ಸೂಚಿಸಿದೆ. ವಾಷಿಂಗ್ಟನ್ ಮೂಲದಿಂದ ಮೊದಲ ಕಂತು 2.9 ಬಿಲಿಯನ್ ಡಾಲರ್ ಹಣವನ್ನು ತಿಂಗಳೊಳಗೆ ಬಿಡುಗಡೆ ಮಾಡಲಾಗುವುದು’ ಎಂದರು.
’ತಳ ಹಿಡಿದ ಹಣಕಾಸು ವ್ಯವಸ್ಥೆಯ ಸುಧಾರಣೆಗೆ ಶ್ರಮಿಸುತ್ತಿದ್ದೇವೆ. ಈ ಸಲುವಾಗಿ ಐಎಂಎಫ್‌ನಿಂದ ಸಾಲದ ಪ್ಯಾಕೇಜ್ ತರಲು ಪ್ರಯತ್ನ ನಡೆಸಿದ್ದೆವು. ಆದರೆ ದೇಶದ ಅತಿ ದೊಡ್ಡ ಸಾಲದಾತ ಚೀನಾದ ಜತೆ ಮೊದಲೇ ಮಾತುಕತೆ ನಡೆಸಿದ ಕಾರಣ ಐಎಂಎಫ್ ಸಾಲವನ್ನು ತಡೆಹಿಡಿಯಲಾಗಿತ್ತು’ ಎಂದು ವಿವರಿಸಿದರು.
’ನಮ್ಮ ಕರ್ತವ್ಯ ನಾವು ಮಾಡಿದ್ದೇವೆ, ನಿರ್ಧಾರ ಐಎಂಎಫ್‌ಗೆ ಬಿಟ್ಟಿದ್ದು’ ಎಂದೂ ವಿಕ್ರಮಸಿಂಘೆ ತಿಳಿಸಿದರು.
ಈ ಕುರಿತು ಶ್ರೀಲಂಕಾದ ಬ್ಯಾಂಕ್ ಮತ್ತು ಐಎಂಎಫ್ ಅಧಿಕೃತ ಮಾಹಿತಿ ನೀಡಿಲ್ಲ.
ರಾಜಕಾರಣಿಗಳ ಭ್ರಷ್ಟಾಚಾರ ಮತ್ತು ತೀವ್ರ ಆರ್ಥಿಕ ಹೊಡೆತದ ಪರಿಣಾಮ ದ್ವೀಪ ರಾಷ್ಟ್ರದ 22 ಲಕ್ಷ ಜನರು ಆಹಾರ, ಇಂಧನ ಹಾಗೂ ಔಷಧಗಳ ಕೊರತೆ ಎದುರಿಸುತ್ತಿದ್ದಾರೆ. ಜತೆಗೆ ಹಣದುಬ್ಬರವೂ ಸೇರಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.