ಕೊಲಂಬೊ: ಅಹಮದಾಬಾದ್‌ನಲ್ಲಿ ಕಳೆದ ವಾರ ಬಂಧನಕ್ಕೆ ಒಳಗಾದ ನಾಲ್ವರು ಶ್ರೀಲಂಕಾದಿಂದ ಭಾರತಕ್ಕೆ ತೆರಳುವುದಕ್ಕೆ 46 ವರ್ಷದ ವ್ಯಕ್ತಿಯೊಬ್ಬ ನೆರವು ನೀಡಿರಬಹುದು ಎಂದು ಶ್ರೀಲಂಕಾ ಭದ್ರತಾ ಪಡೆಗಳು ಶಂಕಿಸಿರುವುದಾಗಿ ಸುದ್ದಿ ಪೋರ್ಟಲ್ ಒಂದು ವರದಿ ಮಾಡಿದೆ.
ನೆರವು ನೀಡಿರುವ ವ್ಯಕ್ತಿಯನ್ನು ಒಸ್ಮಾಂಡ್ ಗೆರಾರ್ಡ್ ಎಂದು ಗುರುತಿಸಲಾಗಿದ್ದು, ಡಿಮಟಾಗೊಡ ಎಂಬ ಸ್ಥಳದ ನಿವಾಸಿ ಎನ್ನಲಾಗಿದೆ. ಈತ ಪದೇ ಪದೇ ತನ್ನ ಹೆಸರನ್ನು ಬದಲಿಸಿಕೊಳ್ಳುತ್ತಿರುತ್ತಾನೆ. ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಬಂಧನಕ್ಕೆ ಒಳಗಾದ ನಾಲ್ವರಿಗೆ ಈತನೇ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿರಬಹುದು ಎಂದು ಶ್ರೀಲಂಕಾ ಪೊಲೀಸರು ಹೇಳಿರುವುದನ್ನು ಉಲ್ಲೇಖಿಸಿ, ‘ನ್ಯೂಸ್‌ಫಸ್ಟ್’ ಸುದ್ದಿ ಪೋರ್ಟಲ್ ವರದಿ ಮಾಡಿದೆ.
ಶ್ರೀಲಂಕಾದ ಸೇನಾ ಬೇಹುಗಾರಿಕಾ ವಿಭಾಗ ಹಾಗೂ ಪೊಲೀಸ್ ಇಲಾಖೆಯ ಭಯೋತ್ಪಾದನಾ ತನಿಖಾ ವಿಭಾಗ ಶಂಕಿತನ ಪತ್ತೆಗಾಗಿ ಕಾರ್ಯಾಚರಣೆ ಪ್ರಾರಂಭಿಸಿವೆ. ಶಂಕಿತನ ಕುರಿತು ಮಹತ್ವದ ಸುಳಿವು ನೀಡುವವರಿಗೆ 20 ಲಕ್ಷ ಶ್ರೀಲಂಕನ್ ರೂಪಾಯಿ ಬಹುಮಾನ ನೀಡುವುದಾಗಿಯೂ ಘೋಷಿಸಿವೆ ಎಂದೂ ವರದಿ ಹೇಳಿದೆ.
ಅಹಮದಾಬಾದ್‌ನಲ್ಲಿ ಮೇ 19ರಂದು ಬಂಧನಕ್ಕೆ ಒಳಗಾದವರಲ್ಲಿ ಮೊಹಮ್ಮದ್ ನುಸ್ರತ್ ಎಂಬಾತನು ದೂರಸಂಪರ್ಕ ಸಾಧನಗಳು ಹಾಗೂ ಎಲೆಕ್ಟ್ರಿಕ್ ಉಪಕರಣಗಳನ್ನು ಸಿಂಗಪುರ, ಮಲೇಷ್ಯಾ ಮತ್ತಿತರ ದೇಶಗಳಿಂದ ಆಮದು ಮಾಡಿಸಿಕೊಂಡು, ಕೊಲಂಬೊದಲ್ಲಿ ಮಾರಾಟ ಮಾಡುವ ವ್ಯಾಪಾರಿಯಾಗಿದ್ದಾನೆ.
ಮೊಹಮ್ಮದ್ ನಫ್ರಾನ್ ಎಂಬ ಇನ್ನೊಬ್ಬ ಬಂಧಿತನನ್ನು ಕುಖ್ಯಾತ ಭೂಗತ ಅಪರಾಧಿ ನಿಯಾಸ್ ನೌಫರ್ ಎಂಬಾತನ ಮೊದಲ ಪತ್ನಿಯ ಮಗ ಎಂದು ಗುರುತಿಸಲಾಗಿದೆ. ಶರತ್ ಅಂಬೆಪಿಟಿಯಾ ಎಂಬ ಹೈಕೋರ್ಟ್ ನ್ಯಾಯಮೂರ್ತಿಯನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ನಿಯಾಸ್ ನೌಫರ್‌ಗೆ ಮರಣದಂಡನೆ ವಿಧಿಸಲಾಗಿತ್ತು.
ಮೊಹಮ್ಮದ್ ಫಾರಿಸ್ ಹಾಗೂ ಮೊಹಮ್ಮದ್ ರಶ್ದೀನ್ ಎಂಬ ಇನ್ನಿಬ್ಬರು ಬಂಧಿತರು ಕೊಲಂಬೊ ನಿವಾಸಿಗಳಾಗಿದ್ದಾರೆ. ಮೊಹಮ್ಮದ್ ಫಾರಿಸ್ ತಳ್ಳುಗಾಡಿ ಎಳೆಯುವ ಕಾರ್ಮಿಕನಾಗಿದ್ದು, ಕಳೆದ ವರ್ಷ ಎರಡು ಬಾರಿ ಶ್ರೀಲಂಕಾ ಅಪರಾಧ ವಿಭಾಗದ ಪೊಲೀಸರು ವಿವಿಧ ಪ್ರಕರಣಗಳಲ್ಲಿ ಈತನನ್ನು ಬಂಧಿಸಿದ್ದರು. ಮೊಹಮ್ಮದ್ ರಶ್ದೀನ್‌ನನ್ನು ತ್ರಿಚಕ್ರವಾಹನದ ಚಾಲಕ ಎಂದು ಗುರುತಿಸಲಾಗಿದ್ದು, ಈತ ಡ್ರಗ್ಸ್ ಸಂಗ್ರಹ ಮಾಡುತ್ತಿದ್ದ ಎನ್ನಲಾಗಿದೆ. 2022ರಲ್ಲಿ ಈತನನ್ನು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.
ಭಯೋತ್ಪಾದನಾ ತನಿಖಾ ವಿಭಾಗದ ಪೊಲೀಸರು ಇದೇ ಮೇ 21ರಂದು ಫಾರಿಸ್‌ನ ಆಪ್ತ ಸ್ನೇಹಿತ ಎನ್ನಲಾದ ಹಮೀದ್ ಅಮೀರ್ ಎಂಬಾತನನ್ನು ಬಂಧಿಸಿದ್ದರು. ಮೇ 19ರಂದು ಫಾರಿಸ್, ಚೆನ್ನೈಗೆ ತೆರಳಿದ್ದ.
ಈ ಎಲ್ಲ ಮಾಹಿತಿಯನ್ನು ಸುದ್ದಿ ಪೋರ್ಟಲ್ ಪ್ರಕಟಿಸಿದೆ.
ಬಂಧಿತರನ್ನು ನಿಷೇಧಿತ ಇಸ್ಲಾಮಿಕ್ ಸ್ಟೇಟ್ (ಐಎಸ್)ಗೆ ಸೇರಿದವರು ಎಂದು ಶಂಕಿಸಲಾಗಿದೆ. ಭಾರತ ಹಾಗೂ ಶ್ರೀಲಂಕಾ ಇವರ ಕುರಿತ ತನಿಖೆಯ ಮಾಹಿತಿಯನ್ನು ಪರಸ್ಪರ ಹಂಚಿಕೊಳ್ಳುತ್ತಿವೆ ಎಂದೂ ‘ನ್ಯೂಸ್‌ಫಸ್ಟ್’ ಬರೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.