ಕೊಲಂಬೊ: ‘ಶ್ರೀಲಂಕಾ ಸರ್ಕಾರವು ಬುರ್ಖಾ ನಿಷೇಧದ ಬಗ್ಗೆ ಆತುರದಲ್ಲಿ ನಿರ್ಧಾರ ಕೈಗೊಳ್ಳುವುದಿಲ್ಲ. ಈ ಸಂಬಂಧ ಒಮ್ಮತ ಅಭಿಪ್ರಾಯಕ್ಕೆ ತಲುಪಿದ ಮೇಲೆ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಹಿರಿಯ ಸಚಿವರೊಬ್ಬರು ಮಂಗಳವಾರ ತಿಳಿಸಿದರು.
ಬುರ್ಖಾ ನಿಷೇಧವನ್ನು ಟೀಕಿಸಿರುವ ಕೊಲಂಬೊದ ಪಾಕಿಸ್ತಾನ ರಾಯಭಾರಿ ಸಾದ್ ಖತಕ್ ಅವರು,‘ ಭದ್ರತೆ ಹೆಸರಿನಲ್ಲಿ ಸರ್ಕಾರ ಬುರ್ಖಾ ಧರಿಸುವುದನ್ನು ನಿಷೇಧಿಸಲು ಯೋಜನೆ ರೂಪಿಸಿದೆ. ಈ ಯೋಜನೆಯು ಮುಸ್ಲಿಮರ ಭಾವನೆಗೆ ಧಕ್ಕೆಯನ್ನುಂಟು ಮಾಡಲಿದೆ. ಅಷ್ಟೇ ಅಲ್ಲದೆ ಮುಸ್ಲಿಂ ಸಮುದಾಯದ ಮಾನವ ಹಕ್ಕಗಳ ಕುರಿತಾಗಿಯೂ ಪ್ರಶ್ನೆಗಳು ಉದ್ಭವಿಸಲಿದೆ ’ ಎಂದಿದ್ದರು. ಇದರ ಬೆನ್ನಲ್ಲೇ ಸರ್ಕಾರವು ಈ ಹೇಳಿಕೆಯನ್ನು ನೀಡಿದೆ.
ಸೋಮವಾರ ನಡೆದ ಸಂಪುಟ ಸಭೆಯಲ್ಲೂ ಬುರ್ಖಾ ನಿಷೇಧದ ಕುರಿತಂತೆ ಯಾವುದೇ ಚರ್ಚೆ ನಡೆದಿಲ್ಲ.
‘ಈ ಬಗ್ಗೆ ಸಮಾಲೋಚನೆ ನಡೆಸಿ, ಒಮ್ಮತ ಅಭಿಪ್ರಾಯಕ್ಕೆ ತಲುಪಿದ ಬಳಿಕವೇ ನಿರ್ಧಾರ ಕೈಗೊಳ್ಳಲಾಗುವುದು. ರಾಷ್ಟ್ರೀಯ ಭದ್ರತೆ ಮತ್ತು ಗುಪ್ತಚರ ಮೌಲ್ಯಗಳ ಆಧಾರದಲ್ಲಿ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು’ ಎಂದು ಹಿರಿಯ ಸಚಿವ ಕೆಹೆಲಿಯಾ ರಾಂಬುಕ್ವೆಲ್ಲಾ ಅವರು ಹೇಳಿದ್ದಾರೆ.
ಇತ್ತೀಚೆಗೆ ಸಾರ್ವಜನಿಕ ಭದ್ರತಾ ಸಚಿವ ಶರತ್ ವೀರಶೇಖರ ಅವರು ‘ಬುರ್ಖಾ ನಿಷೇಧ ಪ್ರಸ್ತಾವನೆಯ ದಾಖಲೆಗೆ ನಾನು ಸಹಿ ಹಾಕಿದ್ದೇನೆ’ ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.