ಕೊಲಂಬೊ: ಶ್ರೀಲಂಕಾ ಅಧಕ್ಷೀಯ ಚುನಾವಣೆ ಫಲಿತಾಂಶ ಪ್ರಕಟವಾದ ಒಂದು ದಿನದ ಬಳಿಕ ಪ್ರಧಾನಿ ದಿನೇಶ್ ಗುಣವರ್ಧನ ಅವರು ರಾಜೀನಾಮೆ ನೀಡಿದ್ದಾರೆ.
2022ರಿಂದ ಪ್ರಧಾನಿಯಾಗಿದ್ದ 75 ವರ್ಷದ ಗುಣವರ್ಧನ, ನೂತನ ಅಧ್ಯಕ್ಷ ಅನುರಾ ಕುಮಾರ ದಿಸ್ಸನಾಯಕೆ ಅವರು ಪ್ರಮಾಣವಚನ ಸ್ವೀಕರಿಸುವುದಕ್ಕೂ ಮುನ್ನವೇ ಅಧಿಕಾರದಿಂದ ಕೆಳಗಿಳಿದಿದ್ದಾರೆ.
ದಿಸ್ಸನಾಯಕೆಗೆ ಪತ್ರ ಬರೆದಿರುವ ಅವರು, ನೂತನ ಅಧ್ಯಕ್ಷರು ಆಯ್ಕೆಯಾದ ಹಿನ್ನೆಲೆಯಲ್ಲಿ ಮತ್ತು ಹೊಸ ಸಂಪುಟ ರಚನೆಗೆ ಅವಕಾಶ ಕಲ್ಪಿಸುವ ಸಲುವಾಗಿ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.
ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ ಶನಿವಾರ ನಡೆದಿತ್ತು. 1.7 ಕೋಟಿ ಅರ್ಹ ಮತದಾರರ ಪೈಕಿ ಶೇ 75ಕ್ಕೂ ಅಧಿಕ ಮಂದಿ ತಮ್ಮ ಹಕ್ಕು ಚಲಾಯಿಸಿದ್ದರು. ಭಾನುವಾರ ಫಲಿತಾಂಶ ಪ್ರಕಟವಾಗಿದೆ.
ನ್ಯಾಷನಲ್ ಪೀಪಲ್ಸ್ ಪವರ್ (ಎನ್‌ಪಿಪಿ) ಒಕ್ಕೂಟದ ಅಭ್ಯರ್ಥಿಯಾಗಿ ಮಾರ್ಕ್ಸ್‌ವಾದಿ ಜನತಾ ವಿಮುಕ್ತಿ ಪೆರೆಮುನಾ (ಜೆವಿಪಿ) ಪಕ್ಷದಿಂದ ಕಣಕ್ಕಿಳಿದಿದ್ದ ದಿಸ್ಸನಾಯಕೆ, ವಿರೋಧ ಪಕ್ಷ ಸಮಗಿ ಜನ ಬಲವೇಗಯ ಅಭ್ಯರ್ಥಿ ಹಾಗೂ ತಮ್ಮ ಸಮೀಪದ ಸ್ಪರ್ಧಿ ಸಜಿತ್ ಪ್ರೇಮದಾಸ್ ಅವರೆದುರು ಗೆಲುವು ಸಾಧಿಸಿದ್ದಾರೆ.
2022ರಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು ಅನುಭವಿಸಿದ್ದ ಶ್ರೀಲಂಕಾ, ಭಾರಿ ಪ್ರತಿಭಟನೆಗಳಿಗೆ ಸಾಕ್ಷಿಯಾಗಿತ್ತು. ತಮ್ಮ ವಿರುದ್ಧ ಜನಾಕ್ರೋಶ ತೀವ್ರಗೊಂಡ ಕಾರಣ ಆಗಿನ ಅಧ್ಯಕ್ಷ ಗೊಟಬಯ ರಾಜಪಕ್ಷ ಜುಲೈನಲ್ಲಿ ದೇಶದಿಂದ ಪಲಾಯನ ಮಾಡಿದ್ದರು. ಬಳಿಕ ವಿಕ್ರಮಸಿಂಘೆ ಅವರನ್ನು ಅಧ್ಯಕ್ಷರಾಗಿ ಸಂಸತ್ತು ನೇಮಕ ಮಾಡಿತ್ತು.
ನಂತರ ನಡೆದ ಮೊದಲ ಚುನಾವಣೆ ಇದಾಗಿದ್ದು, ದಿಸ್ಸನಾಯಕೆಯನ್ನು ಜನರು ಆಯ್ಕೆ ಮಾಡಿದ್ದಾರೆ. ಅವರು ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.