ADVERTISEMENT

ಅಧ್ಯಕ್ಷೀಯ ಚುನಾವಣೆ ಮುಂದೂಡಿಕೆ ಇಲ್ಲ: ಶ್ರೀಲಂಕಾ ಪ್ರಧಾನಿ

ಪಿಟಿಐ
Published 30 ಮೇ 2024, 14:25 IST
Last Updated 30 ಮೇ 2024, 14:25 IST
<div class="paragraphs"><p>ಶ್ರೀಲಂಕಾ ಪ್ರಧಾನಿ ದಿನೇಶ್‌ ಗುಣವರ್ಧನ</p></div>

ಶ್ರೀಲಂಕಾ ಪ್ರಧಾನಿ ದಿನೇಶ್‌ ಗುಣವರ್ಧನ

   

ಕೊಲಂಬೊ: ಇದೇ ವರ್ಷದಲ್ಲಿ ನಿಗದಿಯಾಗಿರುವ ಅಧ್ಯಕ್ಷೀಯ ಚುನಾವಣೆಯನ್ನು ಮುಂದೂಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಯಾವುದೇ ಚರ್ಚೆಗಳು ನಡೆದಿಲ್ಲ ಹಾಗೂ ಚುನಾವಣೆ ಮುಂದೂಡಬೇಕೆಂಬ ಹೇಳಿಕೆಗಳು ಬೇಜವಾಬ್ದಾರಿಯಿಂದ ಕೂಡಿವೆ ಎಂದು ಶ್ರೀಲಂಕಾ ಪ್ರಧಾನಿ ದಿನೇಶ್‌ ಗುಣವರ್ಧನ ಹೇಳಿದ್ದಾರೆ.

ಅಧ್ಯಕ್ಷ ರಾನಿಲ್‌ ವಿಕ್ರಮಸಿಂಘೆ ಅವರ ಯುನೈಟೆಡ್‌ ನ್ಯಾಷನಲ್‌ ಪಕ್ಷದ ಪ್ರಧಾನ ಕಾರ್ಯದರ್ಶಿಯೊಬ್ಬರು, ಅಧ್ಯಕ್ಷೀಯ ಚುನಾವಣೆ ಹಾಗೂ ಸಾರ್ವತ್ರಿಕ ಚುನಾವಣೆಯನ್ನು ಎರಡು ವರ್ಷಗಳ ಅವಧಿಗೆ ಮುಂದೂಡಬೇಕೆಂಬ ಪ್ರಸ್ತಾವ ಮುಂದಿಟ್ಟಿದ್ದರು. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಪ್ರಧಾನಿ ಗುಣವರ್ಧನ, ‘ಸಂವಿಧಾನದ ಪ್ರಕಾರ, ಗಡುವಿನ ಒಳಗೆ ಚುನಾವಣೆಯನ್ನು ನಡೆಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ. ನಿಬಂಧನೆಗಳ ಅನ್ವಯ ಚುನಾವಣೆಯನ್ನು ಮುಂದೂಡುವುದಕ್ಕಾಗಲೀ, ಬೇಗ ನಡೆಸುವುದಕ್ಕಾಗಲೀ ಅವಕಾಶವಿಲ್ಲ. ಅಧ್ಯಕ್ಷೀಯ ಚುನಾವಣೆಯ ಬಳಿಕ ಯಥಾಪ್ರಕಾರ ಸಾರ್ವತ್ರಿಕ ಚುನಾವಣೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಡೆಯಲಿವೆ’ ಎಂದಿದ್ದಾರೆ.

ADVERTISEMENT

ಇದೇ ವಿಚಾರವಾಗಿ ಶ್ರೀಲಂಕಾದ ಚುನಾವಣಾ ಆಯೋಗದ ಅಧ್ಯಕ್ಷ ಆರ್‌.ಎಮ್‌.ಎ.ಎಲ್‌. ರತ್ನಾಯಕೆ ಪ್ರತಿಕ್ರಿಯಿಸಿದ್ದು, ‘ಅಧ್ಯಕ್ಷೀಯ ಚುನಾವಣೆ ನಡೆಸಲು ನಾವು ಸಂಪೂರ್ಣವಾಗಿ ಸನ್ನದ್ಧರಾಗಿದ್ದು, ಈ ಸಂಬಂಧ ಈಗಾಗಲೇ ಹಣ ಹಂಚಿಕೆ ಮಾಡಿದ್ದೇವೆ. ಜುಲೈ ಅಂತ್ಯ ಅಥವಾ ಆಗಸ್ಟ್‌ ತಿಂಗಳ ಆರಂಭದಲ್ಲಿ ಚುನಾವಣಾ ದಿನಾಂಕವನ್ನು ಘೋಷಿಸಲಿದ್ದೇವೆ’ ಎಂದು ಹೇಳಿದ್ದಾರೆ.

2024ರ ಸೆಪ್ಟೆಂಬರ್‌ 17ರಿಂದ ಅಕ್ಟೋಬರ್‌ 16ರ ನಡುವೆ ಅಧ್ಯಕ್ಷೀಯ ಚುನಾವಣೆಯನ್ನು ನಡೆಸಲು ಸಿದ್ಧತೆ ನಡೆಸುತ್ತಿರುವುದಾಗಿ ಶ್ರೀಲಂಕಾದ ಚುನಾವಣಾ ಆಯೋಗವು ಇದೇ ತಿಂಗಳ ಆರಂಭದಲ್ಲಿ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.