ಕೊಲಂಬೊ: ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು 17 ಸಚಿವರನ್ನು ನೇಮಕ ಮಾಡುವ ಮೂಲಕ ನೂತನ ಸಂಪುಟವನ್ನು ರಚಿಸಿದ್ದಾರೆ. ದೇಶದ ಆರ್ಥಿಕ ಬಿಕ್ಕಟ್ಟು ವಿಚಾರಕ್ಕೆ ಸಂಬಂಧಿಸಿ ಗೊಟಬಯ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ನೂತನ ಸಚಿವರು ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಶ್ರೀಲಂಕಾ ಮಾಧ್ಯಮದ ವರದಿಯನ್ನು ಉಲ್ಲೇಖಿಸಿ ಎಎನ್‌ಐ ಟ್ವೀಟಿಸಿದೆ. ಮಹಿಂದ ರಾಜಪಕ್ಸ ಅವರು ಪ್ರಧಾನಿಯಾಗಿ ಮುಂದುವರಿಯಲಿದ್ದು, ಯುವಕರು ಮತ್ತು ಹೊಸಬರಿಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡಲಾಗಿದೆ ಎಂದು ವರದಿಯಾಗಿದೆ.
ಅಧ್ಯಕ್ಷ ಗೊಟಬಯ ರಾಜಪಕ್ಸ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ರಾಷ್ಟ್ರಗೀತೆಯನ್ನು ತಮಿಳು ಭಾಷೆಯಲ್ಲಿ ಹಾಡಲಾಗುತ್ತಿದೆ ಎಂದು ನ್ಯೂಸ್‌ವೈರ್ ವರದಿ ಮಾಡಿದೆ.
ಷೇರು ವಿನಿಮಯ ಕೇಂದ್ರ ಬಂದ್
ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ಶ್ರೀಲಂಕಾದ ಕೊಲಂಬೊ ಷೇರು ವಿನಿಮಯ ಕೇಂದ್ರದಲ್ಲಿ (ಸಿಎಸ್‌ಇ) ಸೋಮವಾರದಿಂದ ಐದು ದಿನ ವಹಿವಾಟು ಸ್ಥಗಿತಗೊಳಿಸಲಾಗಿದೆ. ಈ ಮೂಲಕ ಸತತ ಎರಡನೇ ವಾರ ಸಿಎಸ್‌ಇ ವಹಿವಾಟು ಸ್ಥಗಿತವಾಗಿದೆ.
ಸಾಂಪ್ರದಾಯಿಕ ಹೊಸ ವರ್ಷದ ದಿನದಂದು ಬಡ್ಡಿ ದರದ ಏರಿಕೆ ಮತ್ತು ವಿದೇಶಿ ಸಾಲವನ್ನು ತೀರಿಸಲಾಗದು ಎಂಬ ತೀರ್ಮಾನವನ್ನು ಸರ್ಕಾರ ಪ್ರಕಟಿಸಿತ್ತು. ಬಡ್ಡಿ ದರ ಪ್ರಮಾಣವನ್ನು ದೇಶದ ಸೆಂಟ್ರಲ್ ಬ್ಯಾಂಕ್ ಶೇಕಡ 14.5ಕ್ಕೆ ಏರಿಸಲಾಗಿದೆ.
ಇದನ್ನೂ ಓದಿ–ಶ್ರೀಲಂಕಾಗೆ₹15,200 ಕೋಟಿ ಹೆಚ್ಚುವರಿ ನೆರವು: ಭಾರತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.