ಕೊಲಂಬೊ: ಪ್ರತಿಭಟನಾಕಾರರಿಗೆ ಹೆದರಿ ಅಧಿಕೃತ ನಿವಾಸದಿಂದ ಪರಾರಿಯಾಗಿರುವ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಎಲ್ಲಿದ್ದಾರೆ? ಎಂಬ ಪ್ರಶ್ನೆ ಎದುರಾಗಿದೆ.
ಈ ಮಧ್ಯೆ, ಕೊಲಂಬೊ ಬಂದರಿನಲ್ಲಿ ಲಂಗರು ಹಾಕಿದ್ದ ಶ್ರೀಲಂಕಾ ನೌಕಾಪಡೆಯ ಗಜಬಾಹು ನೌಕೆಗೆ ಲಗೇಜ್‌ಗಳನ್ನು ತುಂಬಿಸಲಾಗಿದೆ ಎಂಬ ವರದಿಗಳು ಹೊರಬಿದ್ದಿವೆ ಎಂದು ಅಲ್ಲಿನ ನ್ಯೂಸ್ ಫಸ್ಟ್ ಚಾನೆಲ್ ಶನಿವಾರ ವರದಿ ಮಾಡಿದೆ.
‘ಶುಕ್ರವಾರ ಜನರ ಗುಂಪು ಎಸ್ಎಲ್ಎನ್ಎಸ್ ಸಿಂದೂರಲಾ ಮತ್ತು ಎಸ್ಎಲ್ಎನ್ಎಸ್ ಗಜಬಾಹು ಹಡಗನ್ನು ಹತ್ತಿತು. ಬಳಿಕ, ಹಡಗು ಬಂದರನ್ನು ಬಿಟ್ಟು ತೆರಳಿತು ಎಂದು ಕೊಲಂಬೊ ಬಂದರಿನಲ್ಲಿರುವ ಹಾರ್ಬರ್ ಮಾಸ್ಟರ್ ಹೇಳಿದ್ದಾರೆ’ಎಂಬುದಾಗಿ ಸುದ್ದಿ ವಾಹಿನಿ ವರದಿ ಮಾಡಿದೆ. ಹೀಗಾಗಿ, ಆ ಹಡಗಿನಲ್ಲಿ ರಾಜಪಕ್ಸ ತೆರಳಿರಬಹುದು ಎಂಬ ಬಲವಾದ ಅನುಮಾನ ಮೂಡಿದೆ.
ಆದರೆ, ಹಡಗು ಹತ್ತಿದವರು ಯಾರು ಎಂಬ ಬಗ್ಗೆ ನನಗೆ ಮಾಹಿತಿ ನೀಡಿಲ್ಲ ಎಂದು ಹಾರ್ಬರ್ ಮಾಸ್ಟರ್ ತಿಳಿಸಿರುವುದಾಗಿಯೂ ಅದು ವರದಿ ಮಾಡಿದೆ.
ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟನ್ನು ಖಂಡಿಸಿ ಶನಿವಾರ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು ಅಧ್ಯಕ್ಷ ಗೊಟಬಯ ರಾಜಪಕ್ಸ ಮನೆಗೆ ನುಗ್ಗಿ ಮನೆಯನ್ನು ವಶಕ್ಕೆ ಪಡೆದುಕೊಂಡರು. ಪ್ರತಿಭಟನೆಯ ಸೂಚನೆ ಅರಿತಿದ್ದ ಗೊಟಬಯ ಶುಕ್ರವಾರವೇ ಕಾಲ್ಕಿತ್ತಿದ್ದಾರೆ.
ವಿದೇಶಿ ಕರೆನ್ಸಿ ಕೊರತೆಯಿಂದ ಶ್ರೀಲಂಕಾ ಅಗತ್ಯ ವಸ್ತುಗಳನ್ನೂ ಖರೀದಿಸಲಾಗದೆ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ, ಮಾರ್ಚ್ ತಿಂಗಳಿಂದಲೂ ಅಧ್ಯಕ್ಷರ ರಾಜೀನಾಮೆಗೆ ಒತ್ತಡ ಕೇಳಿಬರುತ್ತಿದೆ.
ಈ ಮಧ್ಯೆ, ಶನಿವಾರದ ಪ್ರತಿಭಟನೆ ಹಿಂಸಾರೂಪ ತಳೆದಿದ್ದು, ಇಬ್ಬರು ಪೊಲೀಸರು ಸೇರಿ 30 ಮಂದಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ..
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.