ಕೊಲಂಬೊ: 2019ರಲ್ಲಿ ನಡೆದ ಈಸ್ಟರ್ ದಾಳಿಯನ್ನು ತಡೆಯಲು ವಿಫಲರಾದ ಶ್ರೀಲಂಕಾದ ಮಾಜಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಮತ್ತು ಇತರ ನಾಲ್ವರು ಹಿರಿಯ ಮಾಜಿ ಅಧಿಕಾರಿಗಳು ಸಂತ್ರಸ್ತರಿಗೆ ₹ 31 ಕೋಟಿ (ಲಂಕಾ ಕರೆನ್ಸಿಯಲ್ಲಿ 140 ಕೋಟಿ ರೂಪಾಯಿ) ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ಗುರುವಾರ ಆದೇಶ ಹೊರಡಿಸಿದೆ.
ಆತ್ಮಹತ್ಯಾ ಬಾಂಬ್ ದಾಳಿಯನ್ನು ತಪ್ಪಿಸಲು ಭಾರತ ಹಂಚಿಕೊಂಡ ವಿವರವಾದ ಗುಪ್ತಚರ ಮಾಹಿತಿ ಇದ್ದರೂ ಕಾರ್ಯನಿರ್ವಹಿಸಲು ಉನ್ನತ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಏಳು ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠ ಆರೋಪಿಸಿದ್ದು, ಅಂದಿನ ರಕ್ಷಣಾ ಸಚಿವರೂ ಆಗಿದ್ದ ಹಾಗೂ ಸಶಸ್ತ್ರ ಪಡೆಗಳ ಮುಖ್ಯಸ್ಥರಾಗಿದ್ದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರಿಗೆ ಅವರ ವೈಯಕ್ತಿಕ ನಿಧಿಯಿಂದ ₹ 10 ಕೋಟಿ ಪರಿಹಾರ ನೀಡುವಂತೆ ಸೂಚಿಸಿದೆ.
ಮಾಜಿ ಪೊಲೀಸ್ ಮುಖ್ಯಸ್ಥ ಪೂಜಿತ್ ಜಯಸುಂದರ ಮತ್ತು ಮಾಜಿ ರಾಜ್ಯ ಗುಪ್ತಚರ ಸೇವೆಗಳ ಮುಖ್ಯಸ್ಥ ನಿಲಂತ ಜಯವರ್ಧನೆ ಅವರು ತಲಾ ₹ 7.5 ಕೋಟಿ, ಮಾಜಿ ರಕ್ಷಣಾ ಕಾರ್ಯದರ್ಶಿ ಹೇಮಸಿರಿ ಫರ್ನಾಂಡೋ ₹ 5 ಕೋಟಿ ಹಾಗೂ ಮಾಜಿ ರಾಷ್ಟ್ರೀಯ ಗುಪ್ತಚರ ಸೇವಾ ಮುಖ್ಯಸ್ಥ ಸಿಸಿರಾ ಮೆಂಡಿಸ್ ₹ 1 ಕೋಟಿ ಪರಿಹಾರ ಪಾವತಿಸಬೇಕು ಎಂದು ಆದೇಶಿಸಲಾಗಿದೆ.
ಪರಿಹಾರ ಪಾವತಿ ಕುರಿತು 6 ತಿಂಗಳೊಳಗೆ ತನಗೆ ವರದಿ ನೀಡಬೇಕೆಂದು ಸರ್ಕಾರಕ್ಕೆ ಸೂಚನೆ ನೀಡಿದೆ.
ಐಸಿಸ್‌ಗೆ ಸಂಬಂಧ ಹೊಂದಿರುವ ಸ್ಥಳೀಯ ಇಸ್ಲಾಮಿಸ್ಟ್ ಉಗ್ರಗಾಮಿ ಗುಂಪಾದ ನ್ಯಾಷನಲ್ ತೌಹೀದ್ ಜಮಾತ್‌ಗೆ (ಎನ್‌ಟಿಜೆ) ಸೇರಿದ ಒಂಬತ್ತು ಆತ್ಮಾಹುತಿ ಬಾಂಬರ್‌ಗಳು 2019ರ ಏಪ್ರಿಲ್ 21ರಂದು ಮೂರು ಕ್ಯಾಥೋಲಿಕ್ ಚರ್ಚ್‌ಗಳು ಮತ್ತು ಅನೇಕ ಐಷಾರಾಮಿ ಹೋಟೆಲ್‌ಗಳ ಮೇಲೆ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 11 ಭಾರತೀಯರು ಸೇರಿದಂತೆ ಸುಮಾರು 270 ಜನರು ಮೃತಪಟ್ಟಿದ್ದು, 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.