ಅಬುಧಾಬಿ: ಅರಬ್ ಸಂಯುಕ್ತ ಸಂಸ್ಥಾನದಲ್ಲಿ (ಯುಎಇ) ‘ಬೋಚಾಸನವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥಾ ’(ಬಿಎಪಿಎಸ್) ಹಿಂದೂ ದೇವಾಲಯವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರುವರಿ 14ರಂದು ಉದ್ಘಾಟಿಸಲಿದ್ದಾರೆ. ಯುಎಇಯಲ್ಲಿ ಕಲ್ಲಿನಿಂದ ನಿರ್ಮಿಸಲಾಗಿರುವ ಮೊದಲ ಹಿಂದೂ ದೇವಾಲಯವಿದು.
ಪ್ರಧಾನಿ ಮೋದಿ ಅವರು ಎರಡು ದಿನಗಳ ಯುಎಇ ಪ್ರವಾಸ ಇದಾಗಿದೆ.
‘ದೇವಸ್ಥಾನ ಆವರಣದಲ್ಲಿ ಭಾರತ ಮೂಲದ ಮಕ್ಕಳು ಮೂರು ತಿಂಗಳಿಂದ ಪ್ರತಿ ವಾರಾಂತ್ಯ ‘ಕಲ್ಲಿನ ಸೇವೆ’ ಸಲ್ಲಿಸುತ್ತಿದ್ದಾರೆ. ಉದ್ಘಾಟನಾ ಸಮಾರಂಭಕ್ಕೆ ಹಾಜರಾಗುವ ಅತಿಥಿಗಳಿಗೆ ಉಡುಗೊರೆ ನೀಡುವ ಸಲುವಾಗಿ ಕಲ್ಲುಗಳ ಮೇಲೆ ವರ್ಣಚಿತ್ರ ರಚಿಸುತ್ತಿದ್ದಾರೆ. ಇದಕ್ಕೆ ‘ಟೈನಿ ಟ್ರೆಶರ್ಸ್’ ಎಂದು ಹೆಸರಿಡಲಾಗಿದೆ. ಸದ್ಯ ಈ ಕಲಾಕೃತಿಗಳಿಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ’ ಎಂದು 12 ವರ್ಷ ವಯಸ್ಸಿನ ಬಾಲಕಿ ತಿಥಿ ಪಟೇಲ್ ತಿಳಿಸಿದ್ದಾಳೆ.
ಈ ವಾರಾಂತ್ಯದ ಚಟುವಟಿಕೆಯನ್ನು ಆಕೆ ಮತ್ತು ಆಕೆಯ ಸ್ನೇಹಿತರು ಆನಂದಿಸುತ್ತಿರುವುದಾಗಿ ಹೇಳಿದ್ದಾಳೆ.
‘ದೇವಸ್ಥಾನ ನಿರ್ಮಾಣ ಸ್ಥಳದಲ್ಲಿ ದೊರಕುವ ಚಿಕ್ಕ ಕಲ್ಲುಗಳನ್ನು ಆಯ್ದು, ಅವನ್ನು ಸ್ವಚ್ಛಗೊಳಿಸಿ ಪೇಯಿಂಟ್ ಮಾಡಲಾಗಿದೆ. ನಂತರ ವಾರ್ನಿಷ್ ಬಳಿಯಲಾಗಿದೆ. ಕಲ್ಲಿನ ಒಂದು ಬದಿಯಲ್ಲಿ ಹಿತೋಪದೇಶ ಬರೆದಿದ್ದರೆ, ಮತ್ತೊಂದು ಬದಿಯಲ್ಲಿ ದೇವಸ್ಥಾನದ ಯಾವುದಾದರೂ ಒಂದು ಭಾಗವನ್ನು ಚಿತ್ರಿಸಲಾಗಿದೆ. ಸದ್ಯ ಅವುಗಳನ್ನು ಉಡುಗೊರೆ ಪೊಟ್ಟಣದಲ್ಲಿ ಇರಿಸಲಾಗುತ್ತಿದೆ’ ಎಂದು ಎಂಟು ವರ್ಷ ವಯಸ್ಸಿನ ರೇವಾ ಕಾರಿಯ ತಿಳಿಸಿದ್ದಾಳೆ.
ಸುಮಾರು 80 ಸಾವಿರ ಜನರು ಪಾಲ್ಗೊಳ್ಳುವಂತೆ ಕಾರ್ಯಕ್ರಮ ರೂಪಿಸಲಾಗಿತ್ತು. ಆದರೆ ಈಗ ಆ ಸಂಖ್ಯೆಯನ್ನು 35 ಸಾವಿರಕ್ಕೆ ಇಳಿಸಲಾಗಿದೆ ಎಂದು ಅಲ್ಲಿಯ ಭಾರತೀಯ ಸಮುದಾಯ ಮುಖಂಡರೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.