ಜಿನಿವಾ: ದ್ವೀಪ ರಾಷ್ಟ್ರ ಮಡಗಾಸ್ಕರ್‌ಗೆ ಭೀಕರ ಚಂಡಮಾರುತದ ಭೀತಿ ಎದುರಾಗಿದೆ.
ಜನವರಿ 20ರಂದು ‘ಅನಾ’ ಚಂಡಮಾರುತದ ಹೊಡೆತಕ್ಕೆ ಸಿಲುಕಿದ್ದ ಮಡಗಾಸ್ಕರ್, ತೀವ್ರ ಹಾನಿ ಅನುಭವಿಸಿತ್ತು. ಸುಮಾರು 58 ಜನರು ಮೃತಪಟ್ಟಿದ್ದರು. ಇದೀಗ ‘ಅನಾ’ಗಿಂತಲೂ ಹಲವು ಪಟ್ಟು ಪ್ರಬಲವಾದ, ಭೀಕರ ‘ಬಟ್ಸಿರಾಯ್’ ಚಂಡಮಾರುತ ಮಡಗಾಸ್ಕರ್ ಕಡೆಗೆ ಧಾಂಗುಡಿ ಇಟ್ಟಿದೆ.
ಈ ಹಿನ್ನೆಲೆಯಲ್ಲಿ ಈಗಿನಿಂದಲೇ ಮಡಗಾಸ್ಕರ್‌ನಲ್ಲಿ ಪರಿಹಾರ, ರಕ್ಷಣಾ ಕಾರ್ಯ ಆರಂಭವಾಗಿದೆ.
ಗಂಟೆಗೆ 200 ಕಿ.ಮೀ (124 ಮೈಲುಗಳು) ವೇಗದಲ್ಲಿ, ಭಾರೀ ಮಳೆ, ಗಾಳಿಯೊಂದಿಗೆ ‘ಬಟ್ಸಿರಾಯ್’ ಮಡಗಾಸ್ಕರ್‌ಗೆ ಅಪ್ಪಳಿಸಲಿದೆ ಎಂದು ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಜನವರಿಯಲ್ಲಿ ಬಂದ ‘ಅನಾ’ ಚಂಡಮಾರುತದಿಂದ 1,30,000 ಜನ ವಸತಿ ಕಳೆದುಕೊಂಡಿದ್ದರು. ‘ಬಟ್ಸಿರಾಯ್’ ಚಂಡಮಾರತಕ್ಕೆ 1,50,000 ಜನ ಆಶ್ರಯ ಕಳೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ.
‘ನೀವು ಊಹಿಸಿರುವಂತೆಯೇ ನಾವೆಲ್ಲರೂ ತುಂಬಾ ಭಯಭೀತರಾಗಿದ್ದೇವೆ‘ ಎಂದು ‘ವಿಶ್ವ ಆಹಾರ ಕಾರ್ಯಕ್ರಮ’ದ ಪಾಸ್ಕಲಿನಾ ಡಿಸಿರಿಯೊ ಜಿನಿವಾ ಮೂಲದ ಪತ್ರಕರ್ತರಿಗೆ ತಿಳಿಸಿದ್ದಾರೆ. ಕರಾವಳಿ ಪ್ರದೇಶಗಳಲ್ಲಿನ ಜನರನ್ನು ಸ್ಥಳಾಂತರಿಸಲಾಗಿದೆ ಮತ್ತು ಶುಕ್ರವಾರದಿಂದಲೇ ಶಾಲೆಗಳನ್ನು ಮುಚ್ಚಲಾಗಿದೆ. ಶಾಲೆಗಳನ್ನು ಆಶ್ರಯ ತಾಣಗಳಾಗಿ ಪರಿವರ್ತಿಸಲಾಗಿದೆ ಎಂದು ಅವರು ತಿಳಿಸಿದರು.
ವಿಶ್ವ ಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿಯ ಜೆನ್ಸ್ ಲಾರ್ಕೆ ಚಂಡಮಾರುತದ ಪರಿಣಾಮಗಳ ಬಗ್ಗೆ ಮಾತನಾಡಿದ್ದಾರೆ. ‘ಮಹತ್ವದ ಮಾನವೀಯ ಪರಿಣಾಮಗಳು ಎದುರಾಗುವ ಸಾಧ್ಯತೆಗಳಿವೆ’ ಎಂದು ಅವರು ಅತಂಕ ವ್ಯಕ್ತಪಡಿಸಿದ್ದಾರೆ. ಪರಿಹಾರ ಸಾಮಾಗ್ರಿಗಳ ಸರಬರಾಜು ನಡೆಯುತ್ತಿದೆ. ತುರ್ತು ಕಾರ್ಯಕ್ಕಾಗಿ ವಿಮಾನಗಳನ್ನು ನಿಯೋಜಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.