ಸೌದಿ ಆರೇಬಿಯಾ: ಸರಿಯಾಗಿ ಶಾಲೆಗೆ ಹೋಗದೇ ಇದ್ದರೆ ಸಾಮಾನ್ಯವಾಗಿ ಮಕ್ಕಳಿಗೆ ಶಿಕ್ಷೆ ನೀಡುತ್ತಾರೆ. ಆದರೆ ಈ ದೇಶದಲ್ಲಿ 20 ದಿನಕ್ಕಿಂತ ಹೆಚ್ಚು ದಿನ ಮಕ್ಕಳು ಶಾಲೆಗೆ ಗೈರಾದರೆ ಪೋಷಕರಿಗೆ ಜೈಲು ಶಿಕ್ಷೆಯನ್ನು ನೀಡಲಾಗುತ್ತದೆ.
ಇಂಥಹದ್ದೊಂದು ನಿಯಮ ಜಾರಿಗೆ ಬಂದಿರುವುದು ಸೌದಿ ಆರೇಬಿಯಾ ದೇಶದಲ್ಲಿ. ಸರಿಯಾದ ಕಾರಣ ಇಲ್ಲದೆ ಮಕ್ಕಳು 20 ದಿನಕ್ಕಿಂತ ಹೆಚ್ಚು ದಿನ ಶಾಲೆಗೆ ಹೋಗದೆ ಇದ್ದರೆ ದೇಶದ ಮಕ್ಕಳ ರಕ್ಷಣೆ ಕಾನೂನಿನ ಪ್ರಕಾರ ತಂದೆ–ತಾಯಿಗಳಿಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಶೈಕ್ಷಣಿಕ ವರ್ಷದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು ಎನ್ನುವುದು ಈ ನಿಯಮದ ಹಿಂದಿನ ಸದುದ್ದೇಶವಾಗಿದೆ. ಈ ಕುರಿತು ಗಲ್ಫ್ ನ್ಯೂಸ್ ವರದಿಯನ್ನು ಉಲ್ಲೇಖಿಸಿ ಎನ್‌ಡಿಟಿವಿಯಲ್ಲಿ ವರದಿಯಾಗಿದೆ.
ಈ ರೀತಿ ಪೋಷಕರನ್ನು ಬಂಧಿಸಲು ಹಲವು ಹಂತಗಳಿವೆ. ಮೊದಲು ಶಾಲೆಯ ಪ್ರಾಂಶುಪಾಲರು ಸಂಬಂಧಪಟ್ಟ ಶಿಕ್ಷಣ ಇಲಾಖೆಗೆ ವರದಿ ನೀಡಬೇಕು, ನಂತರ ಶಿಕ್ಷಣ ಸಚಿವಾಲಯ ಹಾಗೂ ಕುಟುಂಬ ಆರೈಕೆ ಇಲಾಖೆ ತನಿಖೆ ನಡೆಸಲಿದೆ. ಅದಾದ ಬಳಿಕ ಕೊನೆಯ ಹಂತದಲ್ಲಿ ನ್ಯಾಯಾಲಯಕ್ಕೆ ಕಳುಹಿಸಲಾಗುತ್ತದೆ. ಈ ಮಧ್ಯೆ ಮಗುವಿನ ಪೋಷಕರು ಪ್ರಕರಣವನ್ನು ಇತ್ಯರ್ಥಗೊಳಿಸಿಕೊಳ್ಳಬಹುದು ಎಂದು ವರದಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.