ADVERTISEMENT

ಗಾಲ್ವನ್ ಸಂಘರ್ಷದ ಬಳಿಕ ಭಾರತದ ಪವರ್ ಗ್ರಿಡ್‌ಗಳಿಗೆ ಚೀನಾ ಸೈಬರ್‌ ದಾಳಿ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಮಾರ್ಚ್ 2021, 9:57 IST
Last Updated 1 ಮಾರ್ಚ್ 2021, 9:57 IST
ಸಾಂದರ್ಭಿಕ ಚಿತ್ರ (ಚಿತ್ರ ಕೃಪೆ: ಐಸ್ಟೋಕ್)
ಸಾಂದರ್ಭಿಕ ಚಿತ್ರ (ಚಿತ್ರ ಕೃಪೆ: ಐಸ್ಟೋಕ್)   

ನವದೆಹಲಿ: ಅಮೆರಿಕ ಮೂಲದ ಖಾಸಗಿ ಸೈಬರ್ ಸೆಕ್ಯುರಿಟಿ ಸಂಸ್ಥೆಯೊಂದು ಬಿಡುಗಡೆ ಮಾಡಿದ ವರದಿಯೊಂದರ ಪ್ರಕಾರ, ಜೂನ್‌ನಲ್ಲಿ ಗಾಲ್ವನ್ ಕಣಿವೆ ಸಂಘರ್ಷಣೆಯ ತಿಂಗಳುಗಳ ನಂತರ ಚೀನಾದ ಸೈಬರ್ ಕ್ಯಾಂಪೇನ್ ಭಾರತದ ಪವರ್ ಗ್ರಿಡ್ (ವಿದ್ಯುತ್ ಜಾಲ) ಅನ್ನು ಗುರಿಯಾರಿಸಿದೆ.

ರೆಕಾರ್ಡೆಡ್ ಫ್ಯೂಚರ್ ಅಧ್ಯಯನ ವರದಿಯನ್ನು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಗಾಲ್ವನ್ ಸಂಘರ್ಷದ ನಾಲ್ಕು ತಿಂಗಳುಗಳ ಬಳಿಕ ಅಕ್ಟೋಬರ್‌ನಲ್ಲಿ ವಾಣಿಜ್ಯ ನಗರಿ ಮುಂಬೈನಲ್ಲಿ ವಿದ್ಯುತ್ ಕಡಿತವುಂಟಾಗಿತ್ತು ಎಂದುತಿಳಿಸಿದೆ.

ಆದರೆ, ಭಾರತದ ಪವರ್ ಗ್ರಿಡ್ ಮೇಲೆ ಸೈಬರ್ ದಾಳಿ ಮಾಡುವ ಸಾಮರ್ಥ್ಯವು ಚೀನಾದ ಬಳಿ ಇಲ್ಲ ಎಂದು ತಜ್ಞರು ಹೇಳಿಕೆ ನೀಡಿದ್ದಾರೆ.

ಮುಂಬೈನಲ್ಲಿ ವಿದ್ಯುತ್ ಕಡಿತವುಂಟಾಗಿ ರೈಲುಗಳ ಓಡಾಟ ಸ್ಥಗಿತಗೊಂಡಿದ್ದವು. ಷೇರು ಮಾರುಕಟ್ಟೆ ಮುಚ್ಚಲಾಗಿತ್ತು. ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ಗಳನ್ನು ಚಾಲನೆಯಲ್ಲಿಡಲು ತುರ್ತು ಜನರೇಟರ್‌ಗಳನ್ನು ಬಳಕೆ ಮಾಡಬೇಕಾಯಿತು ಎಂದು ಉಲ್ಲೇಖಿಸಿದೆ.

ADVERTISEMENT

ಅಧ್ಯಯನ ವರದಿ ಪ್ರಕಾರ ಈ ಎರಡು ಘಟನೆಗಳು ಒಂದಕ್ಕೊಂದು ಸಂಬಂಧವನ್ನುಹೊಂದಿವೆ. ಭಾರತದ ವಿದ್ಯುತ್ ಜಾಲದ ಮೇಲೆ ಚೀನಾ ಪ್ರಾಯೋಜಿತ ಹ್ಯಾಕರ್‌ಗಳು ದಾಳಿ ಮಾಡಿರಬಹುದು ಎಂದು ಶಂಕಿಸಲಾಗಿದೆ.

ಭಾರತದಾದ್ಯಂತ ವಿದ್ಯುತ್ ಸರಬರಾಜನ್ನು ಗುರಿಯಾಗಿರಿಸಿ ಚೀನಾ ಕುತಂತ್ರಾಂಶ ಕಾರ್ಯಾಚರಿಸುತ್ತಿದೆ. ಹೈ ವೋಲ್ಟೇಜ್ ಟ್ರಾನ್ಸ್‌ಮಿಷನ್ ಹಾಗೂ ಕಲ್ಲಿದ್ದಲು ವಿದ್ಯುತ್ ಸ್ಥಾವರಗಳನ್ನು ಗುರಿಯಾಗಿಸಿದೆ. ದೇಶದ ಅತಿ ದೊಡ್ಡ ವಿದ್ಯುತ್ ಘಟಕ ಎನ್‌ಟಿಪಿಸಿ ಸೇರಿದಂತೆ 12 ರಷ್ಟು ಕೇಂದ್ರಗಳನ್ನು ಚೀನಾ ಗುರಿಯಾಗಿಸಿದೆ ಎಂದು ವರದಿಯು ತಿಳಿಸಿದೆ.

ಕಳೆದ ವರ್ಷ ಜೂನ್‌ನಲ್ಲಿ ಲಡಾಖ್‌ನ ಗಾಲ್ವನ್ ಕಣಿವೆಯಲ್ಲಿ ಭಾರತ-ಚೀನಾ ಸಂಘರ್ಷ ನಡೆದಿತ್ತು. ಈ ಹಿಂಸಾತ್ಮಕ ಮುಖಾಮುಖಿಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಇತ್ತೀಚೆಗಷ್ಟೇ ಗಾಲ್ವನ್ ಕಣಿವೆಯಲ್ಲಿ ಹತರಾಗಿರುವ ಸೈನಿಕರ ಹೆಸರುಗಳನ್ನು ಚೀನಾ ಬಹಿರಂಗಪಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.