ನವದೆಹಲಿ: ಖಗೋಳ ವಿಜ್ಞಾನಿಗಳು ಇದೇ ಮೊದಲ ಬಾರಿಗೆ ಗುರುತ್ವಾಕರ್ಷಣೆಯ ಮಸೂರದ ಮೂಲಕ ನಕ್ಷತ್ರಪುಂಜವೊಂದರಲ್ಲಿ ಅತಿದೊಡ್ಡ ಕಪ್ಪು ರಂಧ್ರವನ್ನು ಪತ್ತೆಹಚ್ಚಿದ್ದಾರೆ.
‘ಇದು ಸೂರ್ಯನ ದ್ರವ್ಯರಾಶಿಯ 30 ಶತಕೋಟಿಗೂ ಹೆಚ್ಚು ಪಟ್ಟು ದೊಡ್ಡದಾಗಿದೆ’ ಎಂದು ಬ್ರಿಟನ್‌ನ ಡುರ್ಹ್ಯಾಮ್ ವಿಶ್ವವಿದ್ಯಾಲಯದ ಸಂಶೋಧಕರು ತಿಳಿಸಿದ್ದಾರೆ.
ಈ ಕ್ಷೇತ್ರದಲ್ಲಿ ಮತ್ತಷ್ಟು ಕಪ್ಪು ರಂಧ್ರಗಳನ್ನು ಕಂಡುಹಿಡಿಯುವ ಹಾಗೂ ಅವುಗಳ ಮೂಲಗಳ ಕುರಿತು ಅಧ್ಯಯನ ಕೈಗೊಳ್ಳುವುದಕ್ಕೆ ಈ ಸಂಶೋಧನೆ ದಾರಿ ಮಾಡಿಕೊಡಲಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಸಂಶೋಧನಾ ವರದಿಯು ‘ಮಂಥ್ಲಿ ನೋಟಿಸಸ್ ಆಫ್ ದಿ ರಾಯಲ್ ಆಸ್ಟ್ರೋನೊಮಿಕಲ್ ಸೊಸೈಟಿ’ ಎಂಬ ನಿಯತಕಾಲಿಕೆಯಲ್ಲಿ ಪ್ರಕಟಗೊಂಡಿದೆ.
ಕಪ್ಪು ರಂಧ್ರಗಳು ನಿಗೂಢವಾದುವು. ಇವು ಕಾಣಿಸಿಕೊಳ್ಳುವುದು ತೀರಾ ಅಪರೂಪ. ಇವುಗಳ ಮೂಲವು ಅಸ್ಪಷ್ಟವಾಗಿದೆ.
‘ಈಗ ಪತ್ತೆಹಚ್ಚಲಾಗಿರುವ ಕಪ್ಪು ರಂಧ್ರವು ತುಂಬಾ ದೊಡ್ಡದು. ನಿಷ್ಕ್ರಿಯ ಸ್ಥಿತಿಯಲ್ಲಿರುವ ಕಪ್ಪು ರಂಧ್ರಗಳನ್ನು ಕಂಡುಹಿಡಿಯುವುದಕ್ಕೆ ಗುರುತ್ವಾಕರ್ಷಣೆಯ ಮಸೂರವು ಸಹಕಾರಿಯಾಗಿದೆ’ ಎಂದು ಡುರ್ಹ್ಯಾಮ್ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಜೇಮ್ಸ್ ನೈಟಿಂಗೇಲ್ ತಿಳಿಸಿದ್ದಾರೆ.
ಸಂಶೋಧಕರು ತಮ್ಮ ಅಧ್ಯಯನಕ್ಕೆ ಸೂಪರ್ ಕಂಪ್ಯೂಟರ್‌ಗಳನ್ನು ಬಳಸಿದ್ದು, ಕಪ್ಪು ರಂಧ್ರದ ಗಾತ್ರವನ್ನು ಖಾತರಿಪಡಿಸಿಕೊಳ್ಳುವುದಕ್ಕಾಗಿ ಹಬ್ಲ್ ಸ್ಪೇಸ್ ಟೆಲಿಸ್ಕೋಪ್ ನೆರವಿನೊಂದಿಗೆ ಅದರ ಚಿತ್ರಗಳನ್ನು ಸೆರೆಹಿಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.