ಈಜಿಪ್ಟ್‌ನ ಸುಯೆಜ್ ಕಾಲುವೆಯಲ್ಲಿ ಸಿಲುಕಿಕೊಂಡಿದ್ದ ಬೃಹತ್ ಕಂಟೇನರ್ ಹಡಗನ್ನು ತೆರವುಗೊಳಿಸಿದ್ದರೂ, ಸುಗಮ ಸಂಚಾರಕ್ಕೆ ಇನ್ನೂ ನಾಲ್ಕು ದಿನ ಬೇಕಾಗಬಹುದು ಎಂದು ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಅಭಿವೃದ್ಧಿ ಸಂಸ್ಥೆ ಹೇಳಿದೆ.
ಸುಯೆಜ್ ಕಾಲುವೆಯಲ್ಲಿ ಐದು ದಿನಗಳ ಕಾಲ ಸಿಲುಕಿಕೊಂಡಿದ್ದ ಜಪಾನ್ ಮೂಲದ ಬೃಹತ್ ಕಂಟೇನರ್ ಹಡಗು ಎವರ್ ಗಿವನ್ ಅನ್ನು ಸೋಮವಾರ ತೆರವುಗೊಳಿಸಲಾಗಿದೆ.
ಆದರೆ ಐದು ದಿನ ಕಾಲುವೆ ಮಾರ್ಗ ಬಂದ್ ಆಗಿದ್ದರಿಂದ ವಿವಿಧ ರಾಷ್ಟ್ರಗಳ 369ಕ್ಕೂ ಹೆಚ್ಚು ಹಡಗುಗಳು ಸಮುದ್ರದಲ್ಲೇ ಉಳಿಯುವಂತಾಗಿತ್ತು. ಹೀಗಾಗಿ ಸುಯೆಜ್ ಕಾಲುವೆ ಮೂಲಕ ಸಾಗಲು ಸರದಿಯಲ್ಲಿ ಕಾಯುತ್ತಿರುವ ಹಡಗುಗಳು ಒಂದೊಂದಾಗಿ ಸಂಚಾರ ಆರಂಭಿಸಬೇಕಿದೆ.
ಪೂರ್ತಿ ಸಂಚಾರ ಸುಗಮವಾಗಿ ಸಾಗಲು ಮತ್ತು ಈಗಿರುವ ಸರದಿ ಸಾಲು ಕರಗಲು ನಾಲ್ಕರಿಂದ ಐದು ದಿನ ಬೇಕಾಗಬಹುದು ಎಂದು ವಿಶ್ವಸಂಸ್ಥೆಯ ಏಜೆನ್ಸಿಯ ಜಾನ್ ಹಾಫ್‌ಮನ್ ತಿಳಿಸಿದ್ದಾರೆ.
ಅಲ್ಲದೆ, ಕಾಲುವೆ ಬಂದ್ ಆಗಿದ್ದರಿಂದ ವಿವಿಧ ಬಂದರುಗಳಲ್ಲಿನ ಸರಕು ವಿಲೇವಾರಿಗೆ ಕೆಲವು ತಿಂಗಳು ಬೇಕಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.