ಬ್ರಸೀಲಿಯಾ: ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೊನಾರೊ ಅವರಿಗೆ 10 ದಿನಗಳಿಂದ ನಿರಂತರವಾಗಿ ಬಿಕ್ಕಳಿಕೆ ಬರುತ್ತಿದ್ದು, ಅವರ ಕರುಳಿನಲ್ಲಿ ಸಮಸ್ಯೆ ಕಂಡು ಬಂದಿದೆ. ಹೀಗಾಗಿ ಆಸ್ಪತ್ರೆಗೆ ದಾಖಲಾಗಿರುವ ಅವರಿಗೆ ಶಸ್ತ್ರಚಿಕಿತ್ಸೆ ನಡೆಸುವ ಸಾಧ್ಯತೆಗಳಿವೆ.
ಜುಲೈ 3ರಂದು ಹಲ್ಲಿನ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ 66 ವರ್ಷ ವಯಸ್ಸಿನ ಬೋಲ್ಸೊನಾರೊ ಅವರಿಗೆ ನಂತರದ ದಿನಗಳಲ್ಲಿ ಬಿಕ್ಕಳಿಕೆ ಕಾಣಿಸಿಕೊಂಡಿತ್ತು. ಸಾರ್ವಜನಿಕವಾಗಿಯೇ ಅವರು ಬಿಕ್ಕಳಿಸುತ್ತಿದ್ದರು.
ಬೋಲ್ಸನಾರೊರನ್ನು ಮೊದಲು ರಾಜಧಾನಿ ಬ್ರೆಸಿಲಿಯಾದ ಮಿಲಿಟರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ನಂತರ ವಾಯುಪಡೆಯ ವಿಮಾನದಲ್ಲಿ ಸಾವೊ ಪಾಲೊಗೆ ರವಾನಿಸಲಾಯಿತು. ಅಲ್ಲಿ ಅವರನ್ನು ‘ವಿಲಾ ನೋವಾ ಸ್ಟಾರ್’ ಎಂಬ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಅವರ ಪರೀಕ್ಷೆ ನಡೆಸಲಾಗಿದೆ.
‘ಸದ್ಯಕ್ಕೆ ಬೋಲ್ಸೊನಾರೊ ಅವರನ್ನು ಆಸ್ಪತ್ರೆಯಲ್ಲೇ ಉಳಿಸಿಕೊಳ್ಳಲಾಗಿದೆ,’ ಎಂದು ವೈದ್ಯರು ತಿಳಿಸಿದ್ದಾರೆ.
‘ಅವರು ಉತ್ಸಾಹದಿಂದಿದ್ದಾರೆ ಮತ್ತು ಚೆನ್ನಾಗಿದ್ದಾರೆ’ ಎಂದು ಅಧ್ಯಕ್ಷರ ಕಚೇರಿಯು ಬುಧವಾರವಷ್ಟೇ ಹೇಳಿತ್ತು.
ಬೋಲ್ಸೊನಾರೊ ಅವರನ್ನು ಮೊದಲಿಗೆ ಬ್ರೆಸಿಲಿಯಾದಲ್ಲಿ ಆಂಟೋನಿಯೊ ಮ್ಯಾಸಿಡೊ ಎಂಬುವವರು ಪರೀಕ್ಷೆ ನಡೆಸಿದ್ದರು. 2018ರಲ್ಲಿ ಪ್ರಚಾರದ ವೇಳೆ ಬೋಲ್ಸೊನಾರೊ ಅವರ ಹೊಟ್ಟೆಗೆ ಇರಿಯಲಾಗಿತ್ತು. ಅಲ್ಲಿಂದೀಚೆಗೆ ಮ್ಯಾಸಿಡೊ ಅವರು ಬೋಲ್ಸೊನಾರೊ ಅವರಿಗೆ ಹಲವು ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದಾರೆ.
‘ಅಧ್ಯಕ್ಷರು ಗುಣವಾಗಲೆಂದು ಆರಂಭಿಕ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ,’ ಎಂದು ವಿಲಾ ನೋವಾ ಸ್ಟಾರ್ ಆಸ್ಪತ್ರೆ ತಿಳಿಸಿದೆ.
ಅವರಿಗೆ ಶಸ್ತ್ರಚಿಕಿತ್ಸೆ ಅಗತ್ಯವಿರುವುದು ಖಚಿತವಾಗಿದ್ದೇ ಆದರೆ, ಚಾಕು ಇರಿತದ ನಂತರ ನಡೆಯುವ 7ನೇ ಶಸ್ತ್ರಚಿಕಿತ್ಸೆ ಇದಾಗಲಿದೆ. ಮುಂದಿನ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಲಿರುವ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರ ‘ವರ್ಕರ್ಸ್ ಪಾರ್ಟಿ’ಯಿಂದ ಸಿಡಿದು ರಚನೆಯಾಗಿದ್ದ ‘ಸೋಷಿಯಲಿಸ್ಟ್ ಆ್ಯಂಡ್ ಫ್ರೀಡಂ ಪಾರ್ಟಿ’ಯ ಮಾಜಿ ಸದಸ್ಯ ಬೋಲ್ಸನಾರೋ ಅವರಿಗೆ ಇರಿದಿದ್ದ.
ಕಳೆದ ವಾರ ಸ್ಥಳೀಯ ರೇಡಿಯೊ ಕೇಂದ್ರವೊಂದರಲ್ಲಿ ಮಾತನಾಡುತ್ತಿದ್ದ ಬೋಲ್ಸನಾರೊ ‘ಇದೇ ಮೊದಲಬಾರಿಗೆ ನನಗೆ ಹೀಗೆ ಆಗಿದೆ. ಬಹುಶಃ ನಾನು ತೆಗೆದುಕೊಳ್ಳುತ್ತಿರುವ ಔಷಧಗಳ ಪರಿಣಾಮ ಇದಾಗಿರಬಹುದು. ದಿನದ 24 ಗಂಟೆಗಳೂ ನನಗೆ ಬಿಕ್ಕಳಿಗೆ ಬರುತ್ತಿದೆ,’ ಎಂದು ಹೇಳಿದ್ದರು.
ಮಂಗಳವಾರ ರಾತ್ರಿ ತೀರಾ ಬಳಲಿದವರಂತೆ ಕಂಡ ಬ್ರೆಜಿಲ್ ಅಧ್ಯಕ್ಷ ಬೋಲ್ಸನಾರೊ ತಮ್ಮ ಸಮಸ್ಯೆ ಬಗ್ಗೆ ಜನರಿಗೆ, ಬೆಂಬಲಿಗರಿಗೆ ಹೇಳುತ್ತಿದ್ದದ್ದು ಕಂಡು ಬಂದಿತ್ತು.
‘ನನ್ನ ಧ್ವನಿ ಹೋಗಿದೆ. ನಾನು ಮಾತನಾಡಲು ಪ್ರಾರಂಭಿಸಿದರೆ, ಬಿಕ್ಕಳಿಕೆ ಜಾಸ್ತಿಯಾಗುತ್ತದೆ,‘ ಎಂದು ಅವರು ಹೇಳುತ್ತಿದ್ದರು.
ಬ್ರೆಜಿಲ್‌ನಲ್ಲಿ ಕೋವಿಡ್ ಅನ್ನು ನಿಭಾಯಿಸಿದ ರೀತಿಯ ಬಗ್ಗೆ ಸೆನೆಟ್ ತನಿಖೆ ಅರಂಭಿಸಿದೆ. ಅದರ ಬೆನ್ನಿಗೇ ಬೋಲ್ಸನಾರೊ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೋವಿಡ್ ಕಾರಣದಿಂದಾಗಿ ಬ್ರೆಜಿಲ್‌ನಲ್ಲಿ 5,40,000 ಮಂದಿ ಮೃತಪಟ್ಟಿದ್ದಾರೆ. ತನಿಖೆಯನ್ನು ಬುಧವಾರವಷ್ಟೇ 90 ದಿನಗಳ ಅವಧಿಗೆ ವಿಸ್ತರಿಸಲಾಗಿದೆ.
ಇದರ ಜೊತೆಗೇ, ಕೊರೊನಾ ವೈರಸ್ ಲಸಿಕೆ ಖರೀದಿಯಲ್ಲಿನ ಅಕ್ರಮಗಳ ಕುರಿತೂ ತನಿಖೆ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.