ಕಾಬೂಲ್: ಅಫ್ಗಾನಿಸ್ತಾನದ ಕುಂದುಜ್‌ನಲ್ಲಿ ಶಿಯಾ ಮಸೀದಿ ಮೇಲೆ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 100ಕ್ಕೆ ಏರಿಕೆಯಾಗಿದೆ.
ದಾಳಿಯಲ್ಲಿ ಕನಿಷ್ಠ 100 ಮಂದಿ ಮೃತಪಟ್ಟಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದು ಅಮೆರಿಕ ಪಡೆಗಳು ಅಫ್ಗಾನಿಸ್ತಾನ ತೊರೆದ ಬಳಿಕ ನಡೆದ ಭೀಕರ ಆತ್ಮಹತ್ಯಾ ಬಾಂಬ್ ದಾಳಿ ಎನ್ನಲಾಗಿದೆ. ಈವರೆಗೆ ಯಾವುದೇ ಉಗ್ರ ಸಂಘಟನೆ ದಾಳಿಯ ಹೊಣೆಹೊತ್ತುಕೊಂಡಿಲ್ಲ. ಆದರೆ ಇಸ್ಲಾಮಿಕ್ ಸ್ಟೇಟ್ ಉಗ್ರರು ಅಫ್ಗಾನಿಸ್ತಾನದಲ್ಲಿ ಈ ಹಿಂದೆ ಶಿಯಾ ಸಮುದಾಯದವರನ್ನು ಗುರಿಯಾಗಿಸಿ ಹಲವು ಬಾರಿ ದಾಳಿ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.
ದಾಳಿ ವೇಳೆ ಮಸೀದಿಯಲ್ಲಿದ್ದವರಲ್ಲಿ ಹೆಚ್ಚಿನವರು ಮೃತಪಟ್ಟಿದ್ದಾರೆ ಎಂದು ಕುಂದುಜ್ ಪ್ರಾಂತ್ಯದ ಉಪ ಪೊಲೀಸ್ ಮುಖ್ಯಸ್ಥ ಮೊಹಮ್ಮದ್ ಒಬೈದಾ ಹೇಳಿದ್ದಾರೆ. ಮಸೀದಿಯ ಒಳಗೆ ಪ್ರಾರ್ಥನೆ ನಡೆಸುತ್ತಿದ್ದವರ ನಡುವೆ ಬೆರೆತು ಆತ್ಮಹತ್ಯಾ ಬಾಂಬರ್ ದಾಳಿ ನಡೆಸಿರಬಹುದು ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಶಿಯಾ ಸಹೋದರರಿಗೆ ಸುರಕ್ಷತೆ ಒದಗಿಸುವುದನ್ನು ತಾಲಿಬಾನ್ ಖಾತರಿಪಡಿಸುತ್ತದೆ ಎಂದು ಒಬೈದಾ ಭರವಸೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.