ವಾಷಿಂಗ್ಟನ್: ಬಾಹ್ಯಾಕಾಶ ನೌಕೆಯ ತಾಂತ್ರಿಕ ದೋಷದಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿರುವ ನಾಸಾ ಪೈಲಟ್‌ಗಳಾದ, ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಮತ್ತು ಅಮೆರಿಕದ ಬುಚ್ ವಿಲ್ಮೋರ್ ಅವರು ನವೆಂಬರ್‌ನಲ್ಲಿ ಜರುಗಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಬಾಹ್ಯಾಕಾಶದಿಂದಲೇ ಮತದಾನ ಮಾಡಲಿದ್ದಾರೆ.
ವರದಿಗಾರರೊಂದಿಗೆ ನಡೆದ ಲೈವ್ ಸಂವಾದದಲ್ಲಿ ಸುನೀತಾ ವಿಲಿಯಮ್ಸ್ ಅವರು ಈ ವಿಷಯ ಹಂಚಿಕೊಂಡಿದ್ದಾರೆ.
ನಮ್ಮ ಅತಿಮುಖ್ಯ ಜವಾಬ್ದಾರಿಯನ್ನು ನಿಬಾಯಿಸಲೇಬೇಕಲ್ಲವೇ. ಪ್ರತಿಯೊಬ್ಬ ನಾಗರಿಕನು ಚುನಾವಣೆಯಲ್ಲಿ ಮತ ಚಲಾಯಿಸಬೇಕು ಎಂದು ಅವರು ಹೇಳಿದ್ದಾರೆ. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ನಾವು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮತದಾನ ಮಾಡಲು ಯೋಜಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಏತನ್ಮಧ್ಯೆ ಸುನೀತಾ ವಿಲಿಯಮ್ಸ್ ಮತ್ತು ವಿಲ್ಮೋರ್ ಅವರು ತಾವು ಯಾವ ಪಕ್ಷಕ್ಕೆ ಬೆಂಬಲ ಸೂಚಿಸುತ್ತೇವೆ ಎಂಬುದನ್ನು ಬಹಿರಂಗಪಡಿಸಲಿಲ್ಲ. ಬಾಹ್ಯಾಕಾಶದಿಂದ ಮತ ಚಲಾಯಿಸಲು ಅನುಕೂಲ ಮಾಡಿಕೊಡುವಂತೆ ಸಂಬಂಧಿಸಿದ ಪ್ರಾಧಿಕಾರಕ್ಕೆ ಮನವಿ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.
ಜೂನ್ ಮೊದಲ ವಾರದಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿ ಎರಡು ವಾರಗಳ ಬಳಿಕ ಭೂಮಿಗೆ ಹಿಂದಿರುಗಬೇಕಿದ್ದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಸದ್ಯ ಭೂಮಿಗೆ ಬರಲು ಸಾಧ್ಯವಾಗಿಲ್ಲ. ಅವರನ್ನು 2025ರ ಜನವರಿಯಲ್ಲಿ ಭೂಮಿಗೆ ವಾಪಸ್ ಕರೆತರುವ ಯೋಜನೆಯನ್ನು ನಾಸಾ ಹಾಕಿಕೊಂಡಿದೆ.
‘ನಮಗೆ ಯಾವುದೇ ತೊಂದರೆಯಿಲ್ಲ. ನಾಸಾ ನಮ್ಮನ್ನು ಭೂಮಿಗೆ ಸುರಕ್ಷಿತವಾಗಿ ಕರೆತರುತ್ತದೆ ಎಂಬ ವಿಶ್ವಾಸವಿದೆ’ ಎಂದು ಸುನೀತಾ ವಿಲಿಯಮ್ಸ್ ಸುದ್ದಿಗಾರರಿಗೆ ತಿಳಿಸಿದರು.
ಬೋಯಿಂಗ್ ನೌಕೆಯ ಹೀಲಿಯಂ ಸೋರಿಕೆ ಮತ್ತು ಥ್ರಸ್ಟರ್‌ನಲ್ಲಿನ ವೈಫಲ್ಯದಿಂದಾಗಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಅವರು ಹಿಂದಿರುಗುವುದು ತಡವಾಗಿದೆ. ಇತ್ತೀಚೆಗೆ ಬೋಯಿಂಗ್ ನೌಕೆ ಈ ಇಬ್ಬರನ್ನೂ ಅಲ್ಲಿಯೇ ಬಿಟ್ಟು ಭೂಮಿಗೆ ವಾಪಸ್ ಆಗಿದೆ. ಸ್ಪೇಸ್ ಎಕ್ಸ್‌ನ ಸ್ಟಾರ್‌ಲೈನರ್ ಮೂಲಕ ಅವರು ಜನವರಿಯಲ್ಲಿ ಭೂಮಿಗೆ ಬರಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.