ನವದೆಹಲಿ: ಭಾರತವೂ ಸೇರಿದಂತೆ ವಿಶ್ವದ ಎಲ್ಲೆಡೆ ಮಾಧ್ಯಮ ಸ್ವಾತಂತ್ರ್ಯಕ್ಕೆ ಮಹತ್ವ ನೀಡುವುದನ್ನು ನಾವು ಬೆಂಬಲಿಸುತ್ತೇವೆ ಎಂದು ಅಮೆರಿಕವು ಹೇಳಿದೆ. 2002ರ ಗೋಧ್ರಾ ಮತ್ತು ಗೋಧ್ರೋತ್ತರ ಹತ್ಯಾಕಾಂಡಗಳ ಕುರಿತು ಬಿಬಿಸಿ ನಿರ್ಮಿಸಿರುವ ಸಾಕ್ಷ್ಯಚಿತ್ರದ ಲಿಂಕ್‌ಗಳನ್ನು ಯೂಟ್ಯೂಬ್ ಮತ್ತು ಟ್ವಿಟರ್‌ನಿಂದ ತೆಗೆದುಹಾಕುವಂತೆ ಭಾರತ ಸರ್ಕಾರವು ಕೈಗೊಂಡ ಕ್ರಮದ ಬಗ್ಗೆ ಅಮೆರಿಕದ ವಿದೇಶಾಂಗ ಸಚಿವಾಲಯ ಈ ಪ್ರತಿಕ್ರಿಯೆ ನೀಡಿದೆ.
ಪ್ರಜಾಪ್ರಭುತ್ವದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳು ಮುಖ್ಯ ಎಂಬುದನ್ನು ಭಾರತಕ್ಕೆ ಈ ಹಿಂದೆಯೇ ಮನವರಿಕೆ ಮಾಡಿಕೊಡ ಲಾಗಿತ್ತು ಎಂದು ಅಮೆರಿಕದ ವಿದೇ ಶಾಂಗ ಸಚಿವಾಲಯದ ವಕ್ತಾರ ನೆಡ್ ಪ್ರೈಸ್ ಹೇಳಿದ್ದಾರೆ. ವಾಷಿಂಗ್ಟನ್‌ನಲ್ಲಿ ಬುಧವಾರ ನಡೆದ ದೈನಂದಿನ ಮಾಧ್ಯಮಗೋಷ್ಠಿಯ ವೇಳೆ ಪಾಕಿಸ್ತಾನದ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ನೆಡ್ ಈ ರೀತಿ ಉತ್ತರಿಸಿದ್ದಾರೆ.
‘ಅಭಿವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳು ಪ್ರಜಾಪ್ರಭುತ್ವವನ್ನು ಬಲಪಡಿಸುತ್ತವೆ. ಇಂತಹ ಪ್ರಜಾಸತ್ತಾತ್ಮಕ ನೀತಿಗಳಿಗೆ ಆದ್ಯತೆ ನೀಡಬೇಕು ಎಂಬುದನ್ನು ನಾವು ಒತ್ತಿ ಹೇಳುತ್ತೇವೆ. ವಿಶ್ವದ ಬೇರೆಲ್ಲಾ ದೇಶಗಳ ಜತೆಗಿನ ಸಂಬಂಧದ ವೇಳೆ ನಾವು ಇದನ್ನು ಒತ್ತಿ ಹೇಳುತ್ತೇವೆ. ಭಾರತದೊಂದಿಗೂ ನಾವು ಇದನ್ನೇ ಮಾಡಿದ್ದೇವೆ’ ಎಂದ್ದಾರೆ.
ಈ ವಿಚಾರಗಳಿಗೆ ಸಂಬಂಧಿಸಿದಂತೆ ಅಮೆರಿಕವು ಈ ಹಿಂದೆ ನೀಡಿದ್ದ ಹೇಳಿಕೆಗಳ ಬಗ್ಗೆ ಅವರು ಮಾತನಾಡಿ ದ್ದಾರೆ ಎಂದು ವಿಶ್ಲೇಷಿಸಲಾಗಿದೆ. ‘ಭಾರತದಲ್ಲಿ ಸರ್ಕಾರಗಳು, ಪೊಲೀಸರು ಮತ್ತು ಜೈಲು ಅಧಿಕಾರಿಗಳಿಂದಾದ ಮಾನವ ಹಕ್ಕುಗಳ ಉಲ್ಲಂಘನೆ
ಯಂತಹ ಕಳವಳಕಾರಿ ಬೆಳವಣಿ ಗೆಗಳನ್ನು ನಾವು ಗಮನಿಸಿದ್ದೇವೆ’ ಎಂದು 2022ರ ಏಪ್ರಿಲ್ 12ರಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಹೇಳಿದ್ದರು. ಅಮೆರಿಕದ ವಿದೇಶಾಂಗ ಸಚಿವಾಲಯದ ‘ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ವರದಿ–2021’ ಬಿಡುಗಡೆ ಸಂದರ್ಭದಲ್ಲೂ ಅವರು ಇದೇ ಮಾತು ಹೇಳಿದ್ದರು.
ತಿರುವನಂತಪುರ: ಇಲ್ಲಿನ ಪ್ರಸಿದ್ಧ ಪ್ರವಾಸಿತಾಣ ಶಂಖುಮುಖಮ್ ಕಡಲತೀರದಲ್ಲಿ ಬಿಬಿಸಿ ನಿರ್ಮಿತ ಸಾಕ್ಷ್ಯಚಿತ್ರವನ್ನು ಕಾಂಗ್ರೆಸ್ ಗುರುವಾರ ಸಂಜೆ ಪ್ರದರ್ಶಿಸಿತು. ಪ್ರವಾಸಕ್ಕೆ ಬಂದಿದ್ದ ಸಾಕಷ್ಟು ಸಂಖ್ಯೆಯ ಜನರು ಸಾಕ್ಷ್ಯಚಿತ್ರ ವೀಕ್ಷಿಸಿದರು. ಅಹಿತಕರ ಘಟನೆ ನಡೆಯದಂತೆ ಪೊಲೀಸರು ಭದ್ರತೆ ಒದಗಿಸಿದ್ದರು.
ಚಿತ್ರ ಪ್ರದರ್ಶನ ವಿರೋಧಿಸಿ ಪ್ರತಿಭಟನೆ ನಡೆಸಲು ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಮುಂದಾಗಿದ್ದರು. ಆದರೆ, ಭಾರಿ ಪ್ರಮಾಣದಲ್ಲಿ ಜನರು ಸೇರಿದ್ದರಿಂದ, ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿದರು ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾರೆ. ಸಾಕ್ಷ್ಯಚಿತ್ರ ಹೆಚ್ಚು ಜನರನ್ನು ತಲುಪಬೇಕು ಎಂಬ ಉದ್ದೇಶದಿಂದ ಕಡಲತೀರದಲ್ಲಿ ಪ್ರದರ್ಶನ ಆಯೋಜಿಸಲಾಗಿತ್ತು ಎಂದು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಜಿ.ಎಸ್. ಬಾಬು ಅವರು ಹೇಳಿದ್ದಾರೆ.
ಮುಂಬೈನಲ್ಲೂ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಸಿದ್ಧತೆ ನಡೆಸಲಾಗಿದೆ. ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್‌ನ (ಟಿಸ್) ‘ದಿ ಪ್ರೊಗ್ರೆಸಿವ್ ಸ್ಟೂಡೆಂಟ್ಸ್ ಫೋರಂ (ಪಿಎಸ್‌ಎಫ್) ಪ್ರದರ್ಶನ ಆಯೋಜಿಸಿದೆ. ಜೆಎನ್‌ಯು ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿ, ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ ಪ್ರದರ್ಶನ ಆಯೋಜಿಸಲಾಗಿದೆ ಎಂದು ಸಂಘಟಕರು ಹೇಳಿದ್ದಾರೆ. ಚಿತ್ರ ಪ್ರದರ್ಶನಕ್ಕೆ ಟಿಸ್‌ನ ಎಲ್ಲ ವಿದ್ಯಾರ್ಥಿಗಳು ಶನಿವಾರ ಹಾಜರಾಗಬೇಕು ಎಂದು ವಿದ್ಯಾರ್ಥಿ ಸಂಘಟನೆ ಮನವಿ ಮಾಡಿದೆ. ಪ್ರದರ್ಶನಕ್ಕೆ ಆಡಳಿತ ಮಂಡಳಿ ಇನ್ನಷ್ಟೇ ಅನುಮತಿ ನೀಡಬೇಕಿದೆ.
---
ಇದು ಭಾರತದ ವಿರುದ್ಧದ ಷಡ್ಯಂತ್ರ. ಪ್ರಧಾನಿ ಮೋದಿ ಅವರ ಚಾರಿತ್ರ್ಯವಧೆಯು ಭಾರತಕ್ಕೆ ಮಾಡಿದ ಅಪಮಾನ. ಬಿಬಿಸಿ ವರ್ತನೆ ಸರಿಯಲ್ಲ
- ಪಿ.ಎಸ್. ಶ್ರೀಧರನ್ ಪಿಳ್ಳೈ,ಗೋವಾ ರಾಜ್ಯಪಾಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.