ADVERTISEMENT

ಯಾರಾದರೂ, ಹೇಗಾದರೂ ನಮಗೆ ಬೆಂಬಲ ನೀಡಿ, ಆದರೆ ಮೌನದಿಂದಿರಬೇಡಿ: ಝೆಲೆನ್‌ಸ್ಕಿ

ಏಜೆನ್ಸೀಸ್
Published 4 ಏಪ್ರಿಲ್ 2022, 6:47 IST
Last Updated 4 ಏಪ್ರಿಲ್ 2022, 6:47 IST
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ   

ಕೀವ್: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ಗ್ರ್ಯಾಮಿ ಪ್ರಶಸ್ತಿ ಕಾರ್ಯಕ್ರಮದಲ್ಲಿ ವಿಡಿಯೊ ಸಂದೇಶದಲ್ಲಿ ಕಾಣಿಸಿಕೊಂಡರು. ಈ ವೇಳೆ ಉಕ್ರೇನ್ ಮೇಲೆ ರಷ್ಯಾ ಆಕ್ರಮಣದ ಕುರಿತು ಕಥೆಯನ್ನು ಹೇಳಲು ಬೆಂಬಲ ಸೂಚಿಸುವಂತೆ ಮನವಿ ಮಾಡಿದರು.

ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಪ್ರಸಾರವಾದ ಸಂದೇಶದಲ್ಲಿ, ಆಕ್ರಮಣದ ವಿರುದ್ಧದ ಮೌನ ಮಾರಣಾಂತಿಕ ಎಂದ ಅವರು, ಈ ಮೌನವು ಮಕ್ಕಳು ಸೇರಿದಂತೆ ಉಕ್ರೇನ್ ಜನರ ಕನಸುಗಳು ಮತ್ತು ಜೀವನವನ್ನು ನಂದಿಸುವ ಬೆದರಿಕೆಯಾಗಿದೆ ಎಂದರು.

'ನಮ್ಮ ಸಂಗೀತಗಾರರು ಸೂಟ್ ಬದಲಿಗೆ ದೇಹದ ರಕ್ಷಾಕವಚವನ್ನು ಧರಿಸುತ್ತಿದ್ದಾರೆ. ಅವರು ಆಸ್ಪತ್ರೆಗಳಲ್ಲಿ ಗಾಯಾಳುಗಳಿಗಾಗಿ ಹಾಡುತ್ತಿದ್ದಾರೆ. ಕೇಳಿಸದವರಿಗೂ ಹಾಡನ್ನು ಹಾಡುತ್ತಿದ್ದಾರೆ. ಆದರೆ, ಸಂಗೀತವು ಹೇಗಾದರೂ ಅವರನ್ನು ಮುಟ್ಟುತ್ತದೆ' ಎಂದು ಹೇಳಿದರು.

ADVERTISEMENT

ಸಮಾರಂಭದ ಆರಂಭಕ್ಕೂ ಮುನ್ನ, ಮಾನವೀಯ ಬಿಕ್ಕಟ್ಟು ತಲೆದೋರಿರುವ ಉಕ್ಳೇನ್‌ಗೆ ನೆರವು ನೀಡಲು ಹಣ ಸಂಗ್ರಹಿಸಲು 'ಸ್ಟ್ಯಾಂಡ್ ಅಪ್ ಫಾರ್ ಉಕ್ರೇನ್' ಎಂಬ ಸಾಮಾಜಿಕ ಮಾಧ್ಯಮ ಅಭಿಯಾನಕ್ಕೆ ರೆಕಾರ್ಡಿಂಗ್ ಅಕಾಡೆಮಿ ಮತ್ತು ಅದರ ಪಾಲುದಾರ ಗ್ಲೋಬಲ್ ಸಿಟಿಜನ್ ಚಾಲನೆ ನೀಡಿತು.

'ಈ ಮೌನವನ್ನು ನಿಮ್ಮ ಸಂಗೀತದಿಂದ ತುಂಬಿ. ನಮ್ಮ ಕಥೆಯನ್ನು ಹೇಳಲು ಇಂದೇ ನಿಮ್ಮ ಸಂಗೀತವನ್ನು ಬಳಸಿ. ನಿಮ್ಮ ಸಾಮಾಜಿಕ ಜಾಲತಾಣಗಳಲ್ಲಿ, ಟಿವಿಯಲ್ಲಿ ಯುದ್ಧದ ಬಗ್ಗೆ ಸತ್ಯವನ್ನು ಹೇಳಿ, ನೀವು ಯಾವುದೇ ರೀತಿಯಲ್ಲಿ ನಮ್ಮನ್ನು ಬೆಂಬಲಿಸಿ, ಆದರೆ ಮೌನವಾಗಿರಬೇಡಿ. ಆಗಷ್ಟೇ ನಮ್ಮ ಎಲ್ಲಾ ನಗರಗಳಲ್ಲಿ ಶಾಂತಿ ನೆಲೆಸುತ್ತದೆ' ಎಂದು ಝೆಲೆನ್‌ಸ್ಕಿ ಹೇಳಿದರು.

ಝೆಲೆನ್‌ಸ್ಕಿ ಅವರ ಮನವಿಯ ಮೇರೆಗೆ, ಜಾನ್ ಲೆಜೆಂಡ್ ತನ್ನ 'ಫ್ರೀ' ಹಾಡನ್ನು ಉಕ್ರೇನ್ ಸಂಗೀತಗಾರರಾದ ಸಿಯುಝನ್ನಾ ಇಗ್ಲಿಡಾನ್, ಮಿಕಾ ನ್ಯೂಟನ್ ಮತ್ತು ಕವಿ ಲ್ಯುಬಾ ಯಾಕಿಮ್ಚುಕ್ ಅವರೊಂದಿಗೆ ಹಾಡಿದರು. ಈ ವೇಳೆ ಯುದ್ಧದಿಂದ ಉಕ್ರೇನ್‌ನಲ್ಲಿ ಉಂಟಾಗಿರುವ ಪರಿಣಾಮಗಳ ಚಿತ್ರಗಳನ್ನು ಅವರ ಹಿಂದೆ ಪರದೆಯ ಮೇಲೆ ಪ್ರದರ್ಶಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.