ADVERTISEMENT

ಗರ್ಭಪಾತದ ಹಕ್ಕು ನಿಷೇಧಿಸಿದ ಅಮೆರಿಕ ಸುಪ್ರೀಂ ಕೋರ್ಟ್; ವಿಶ್ವಸಂಸ್ಥೆ ಅಸಮಾಧಾನ

ಏಜೆನ್ಸೀಸ್
Published 25 ಜೂನ್ 2022, 13:47 IST
Last Updated 25 ಜೂನ್ 2022, 13:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್/ ವಿಶ್ವಸಂಸ್ಥೆ: ಅಮೆರಿಕದಲ್ಲಿ ಕಳೆದ 50 ವರ್ಷಗಳಿಂದ ಜಾರಿಯಲ್ಲಿದ್ದ, ಮಹಿಳೆಯರ ಗರ್ಭಪಾತದ ಸಾಂವಿಧಾನಿಕ ಹಕ್ಕನ್ನು ಸುಪ್ರೀಂ ಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಅಮೆರಿಕದ ಹಲವು ರಾಜ್ಯಗಳಲ್ಲಿ ಇನ್ನು ಮುಂದಿನ ದಿನಗಳಲ್ಲಿ ಗರ್ಭಪಾತವನ್ನು ನಿಷೇಧಿಸುವ ಸಾಧ್ಯತೆ ಹೆಚ್ಚಾಗಿದೆ.

ಅಮೆರಿಕದ ಮಹಿಳೆಯರಿಗೆ ಗರ್ಭಪಾತ ಮಾಡಿಸಿಕೊಳ್ಳಲು ಅವಕಾಶ ನೀಡಿದ್ದ 50 ವರ್ಷದ ಹಿಂದಿನ ತೀರ್ಪನ್ನು ಸುಪ್ರೀಂ ಕೋರ್ಟ್ 6-3 ಮತಗಳಿಂದ ರದ್ದುಗೊಳಿಸುವ ತೀರ್ಮಾನವನ್ನು ಶುಕ್ರವಾರ ಕೈಗೊಂಡಿತ್ತು. ಈ ತೀರ್ಪಿನ ಪ್ರಕಾರ ಮುಂದಿನ ದಿನಗಳಲ್ಲಿ ಗರ್ಭಪಾತಕ್ಕೆ ಸಂಬಂಧಿಸಿ ಕಾನೂನು ರಚಿಸುವುದು ರಾಜ್ಯಗಳಿಗೆ ಸಂಬಂಧಿಸಿರಲಿದೆ. ಅಲ್ಲದೆ, ಕೆಲವು ರಾಜ್ಯಗಳು ಗರ್ಭಪಾತವನ್ನು ನಿಷೇಧ ಮಾಡುವುದಾಗಿ ಈಗಾಗಲೇ ಘೋಷಣೆ ಮಾಡಿವೆ.

ಗರ್ಭಪಾತದ ಹಕ್ಕು ರಕ್ಷಿಸಲು ಯತ್ನಿಸುವೆ: ಬೈಡನ್
ಸುಪ್ರೀಂ ಕೋರ್ಟ್‌ನಿಂದ ರದ್ದಾಗಿರುವ ಗರ್ಭಪಾತದ ಸಾಂವಿಧಾನಿಕ ಹಕ್ಕನ್ನು ರಕ್ಷಿಸಲು ಯತ್ನಿಸುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಭರವಸೆ ನೀಡಿದ್ದಾರೆ. ‘ಇಷ್ಟಕ್ಕೇ ಎಲ್ಲವೂ ಮುಗಿದಿಲ್ಲ. ಹಕ್ಕುಗಳನ್ನು ರಕ್ಷಿಸುವ ಡೆಮಾಕ್ರಟ್‌ ಪಕ್ಷದ ಹೆಚ್ಚು ಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು’ ಎಂದು ಅವರು ಜನರಿಗೆ ಮನವಿ ಮಾಡಿದ್ದಾರೆ.

ADVERTISEMENT

ಶ್ವೇತಭವನದಲ್ಲಿ ಮಾತನಾಡಿದ ಅವರು, ‘ದೇಶದಾದ್ಯಂತ ಮಹಿಳೆಯರ ಆರೋಗ್ಯ ಮತ್ತು ಜೀವನ ಅಪಾಯದಲ್ಲಿದೆ. ಇದು ನ್ಯಾಯಾಲಯ ಮತ್ತು ದೇಶಕ್ಕೆ ದುಃಖಕರ ಸಂಗತಿ’ ಎಂದು ಹೇಳಿದರು.

ವಿಶ್ವಸಂಸ್ಥೆ ಅಸಮಾಧಾನ:ಅಮೆರಿಕದ ಸುಪ್ರೀಂ ಕೋರ್ಟ್‌ನ ಈ ತೀರ್ಮಾನವು, ಲಿಂಗ ಸಮಾನತೆ ಮತ್ತು ಮಹಿಳೆಯರ ಮಾನವೀಯ ಹಕ್ಕುಗಳಿಗೆ ದೊಡ್ಡ ಹಿನ್ನಡೆಯಾಗಿದೆ ಎಂದು ವಿಶ್ವಸಂಸ್ಥೆ ಅಸಮಾಧಾನ ವ್ಯಕ್ತಪಡಿಸಿದೆ.

ವಿವಿಧೆಡೆ ಪ್ರತಿಭಟನೆ: ಸುಪ್ರೀಂ ಕೋರ್ಟ್‌ ತೀರ್ಪಿನ ಪರವಾಗಿ ಹಾಗೂ ವಿರೋಧಿಸಿ ಅಮೆರಿಕದಲ್ಲಿ ಪ್ರತಿಭಟನೆಗಳು ನಡೆದಿವೆ.

ಗರ್ಭಪಾತ ವಿರೋಧಿಸಿ ಶುಕ್ರವಾರ ರಾತ್ರಿ ಅರಿಜೋನಾ ಕ್ಯಾಪಿಟಲ್‌ನಲ್ಲಿ ಮತಪ್ರದರ್ಶನ ನಡೆಸುತ್ತಿದ್ದವರನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.